ಮಡಿಕೇರಿ, ಮಾ. 23: ಹಳೇ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಕನ್ನಂಡಬಾಣೆಯ ನಿವಾಸಿ ಪುಷ್ಪ ಎಂಬವರ ಪುತ್ರ ಗೋಕುಲ್ (24) ಹತ್ಯೆಗೀಡಾದ ಯುವಕನಾಗಿದ್ದು, ಚಾಮುಂಡೇಶ್ವರಿ ನಗರದ ನಿವಾಸಿ ಕಾರ್ತಿಕ್ ಹತ್ಯೆಗೈದ ಆರೋಪಿಯಾಗಿದ್ದಾನೆ.ಮೃತ ಗೋಕುಲ್ ಹಾಗೂ ಆತನ ಕೆಲ ಸಹಪಾಠಿಗಳು ಮತ್ತು ಕಾರ್ತಿಕ್ ನಡುವೆ ಹಳೇ ವೈಷಮ್ಯವಿತ್ತು ಎನ್ನಲಾಗಿದೆ. ಆರೋಪಿ ಕಾರ್ತಿಕ್ ನೀಡಿರುವ ಹೇಳಿಕೆಯಂತೆ ಗೋಕುಲ್ ಮತ್ತು ಆತನ ಸಹಪಾಠಿಗಳು ಕಾರ್ತಿಕ್‍ನನ್ನು ಬಹಳ ದಿನಗಳಿಂದ ಹಿಂಬಾಲಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಕಾರ್ತಿಕ್ ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಕೂಡ ಹೆದರುವಂತಾಗಿತ್ತು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಕಾರ್ತಿಕ್ ನಿನ್ನೆ ದಿನ ನಗರದ ಬಾರ್‍ವೊಂದರಲ್ಲಿ ಮದ್ಯ ಸೇವಿಸಿ ಕೆಳಗಿನ ಗೌಡ ಸಮಾಜದಲ್ಲಿದ್ದ ಮದುವೆ ಚಪ್ಪರ ಸಮಾರಂಭವೊಂದಕ್ಕೆ ತೆರಳಿದ್ದಾನೆ. ಈ ವೇಳೆ ಗೋಕುಲ್ ತನ್ನ ಬೈಕ್‍ನಲ್ಲಿ
(ಮೊದಲ ಪುಟದಿಂದ) ಕನ್ನಂಡಬಾಣೆಯಿಂದ ಮಡಿಕೇರಿ ನಗರದತ್ತ ಬರುತ್ತಿದ್ದುದನ್ನು ಗಮನಿಸಿದ ಆರೋಪಿ ರಸ್ತೆಯಲ್ಲಿ ತಡೆದು ನಿಲ್ಲಿಸಿ ಗೋಕುಲ್‍ನೊಂದಿಗೆ ಜಗಳವಾಡಿದ್ದಾನೆ. ಈ ಸಂದರ್ಭ ಪರಸ್ಪರ ತಳ್ಳಾಟ ನಡೆದು ಗೋಕುಲ್ ಸ್ಥಳದಿಂದ ತೆರಳಿದ್ದಾನೆ.
ನಂತರ ತುರ್ತು ಕೆಲಸಕ್ಕೆಂದು ತನ್ನ ಸ್ನೇಹಿತನೋರ್ವನ ಆಟೋ ಪಡೆದುಕೊಂಡಿದ್ದ ಕಾರ್ತಿಕ್ ಕನ್ನಂಡಬಾಣೆಯ ಪಂಪ್ ಹೌಸ್ ಬಳಿ ತೆರಳಿ ಆಟೋವನ್ನು ಅನತಿ ದೂರದಲ್ಲಿ ನಿಲ್ಲಿಸಿ ಗೋಕುಲ್‍ಗಾಗಿ ಹೊಂಚು ಹಾಕಿ ಕುಳಿತ್ತಿದ್ದಾನೆ. ತಡರಾತ್ರಿ ನಗರದಿಂದ ತನ್ನ ಮನೆಗೆಂದು ಗೋಕುಲ್ ಬೈಕ್‍ನಲ್ಲಿ ಹಿಂತಿರುಗುತ್ತಿದ್ದ ಸಂದರ್ಭ ಆತನನ್ನು ಅಡ್ಡಗಟ್ಟಿದ ಕಾರ್ತಿಕ್ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಕಡಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಟೋ, ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ.