ಪೊನ್ನಂಪೇಟೆ, ಮಾ. 23: ಪೊನ್ನಂಪೇಟೆಯನ್ನು ನೂತನ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ನೇತೃತ್ವದ ನಿಯೋಗ ತಾ. 21 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.ಪೊನ್ನಂಪೇಟೆಯನ್ನು ಕೇಂದ್ರವಾಗಿರಿಸಿಕೊಂಡು 48 ಗ್ರಾಮಗಳನ್ನು ಸೇರಿಸಿ ತಾಲೂಕು ಕೇಂದ್ರ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಾಲೂಕು ಹೋರಾಟ ಸಮಿತಿ ಮನವಿ ಮಾಡಿತು.ಬೆಂಗಳೂರಿಗೆ ತೆರಳಿ ಮುಖ್ಯ ಮಂತ್ರಿಯನ್ನು ಭೇಟಿಯಾದ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು ಪೊನ್ನಂಪೇಟೆ ತಾಲೂಕು ಕೇಂದ್ರವಾಗಲು ಇರುವ ಸಾಧ್ಯತೆಗಳ ಬಗ್ಗೆ ಮನವರಿಕೆ ಮಾಡಿದರು. ಪ್ರಸ್ತುತ ವೀರಾಜಪೇಟೆ ತಾಲೂಕಿನ ಖಜಾನೆ, ಅಗ್ನಿಶಾಮಕ ದಳ, ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ 22 ಇಲಾಖೆಗಳು ಪೊನ್ನಂಪೇಟೆಯಲ್ಲಿದೆ. ಈ ವ್ಯಾಪ್ತಿಯಲ್ಲಿ 1.15 ಲಕ್ಷ ಜನಸಂಖ್ಯೆಯಿದ್ದು 48 ಗ್ರಾಮಗಳಿದೆ. ವೀರಾಜಪೇಟೆ ಕೇಂದ್ರವಾಗಿರುವ ತಾಲೂಕಿಗೆ ದೂರದೂರಿನಿಂದ ಜನ ಬಂದು ಸರಕಾರಿ ಕಾರ್ಯಗಳನ್ನು ಪೂರೈಸಲು ಕಷ್ಟಸಾಧ್ಯವಾಗುತ್ತಿದ್ದು, ಪೊನ್ನಂಪೇಟೆ ತಾಲೂಕು ಕೇಂದ್ರವಾದಲ್ಲಿ ಇಂಥಹ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೋರಾಟ ಸಮಿತಿ ಪ್ರಮುಖರು ಮುಖ್ಯ ಮಂತ್ರಿಗಳಿಗೂ ತಿಳಿಸಿದರು.
(ಮೊದಲ ಪುಟದಿಂದ) ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ನೇತೃತ್ವದ ನಿಯೋಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರೇಷ್ಮೇ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಕುಶಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾಜಿ ಅಚ್ಯುತ, ಎರ್ಮು ಸೇರಿದಂತೆ ಹೋರಾಟ ಸಮಿತಿ ಪ್ರಮುಖರು ಇದ್ದರು.
ಯಾವದೇ ತಾಲೂಕನ್ನು ರೀಪಿಸಬೇಕಾದಲ್ಲಿ ಕನಿಷ್ಟ 25 ರಿಂದ 30 ಕೋಟಿ ರೂಪಾಯಿ ಅನುದಾನ ಅಗತ್ಯ. ಪೊನ್ನಂಪೇಟೆ ಹೊಸ ತಾಲೂಕು ಕೇಂದ್ರವಾಗಿಸಲು ಇರುವ ಆರ್ಥಿಕ ಸಾಧ್ಯತೆ ಬಗ್ಗೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದರೆನ್ನಲಾಗಿದೆ.
ಸದನದಲ್ಲಿ ಸುನಿಲ್ ಆಗ್ರಹ
ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದೆ. ಅಲ್ಲದೆ ಪೊನ್ನಂಪೇಟೆಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿದ್ದು, ಇಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಟ್ಟಡವನ್ನು ಕಟ್ಟಲಾಗಿದೆ. ನಾಡಕಚೇರಿ, ಉಪ ಆರಕ್ಷಕ ಠಾಣೆ, ಉಪ ಖಜಾನೆ, ಉಪ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಹೀಗೆ ಸರಕಾರದ 16 ಇಲಾಖೆಗಳ ಕಚೇರಿಗಳು ಇಲ್ಲಿವೆ ಎಂದು ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸರಕಾರದ ಗಮನಸೆಳೆದಿದ್ದಾರೆ.
ವೀರಾಜಪೇಟೆ ತಾಲೂಕು ಸುಮಾರು 1,044 ಚದರ ಕಿ.ಮೀ. ವಿಸ್ತೀರ್ಣವಿದ್ದು ಭೌಗೋಳಿಕವಾಗಿ ದೊಡ್ಡದಾಗಿದೆ ಮತ್ತು ಪೊನ್ನಂಪೇಟೆ ವೇಗವಾಗಿ ಬೆಳೆಯುತ್ತಿರುವ ಹೋಬಳಿಯಾಗಿದೆ. ಪೊನ್ನಂಪೇಟೆ ಯನ್ನು ತಾಲೂಕು ಕೇಂದ್ರ ಎಂದು ಘೋಷಿಸಬೇಕೆಂದು ಸುನಿಲ್ ಅವರು ಶೂನ್ಯ ವೇಳೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.