ನಾಪೆÇೀಕ್ಲು, ಮಾ. 24: ಕೊಡಗಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾದ ಯವಕಪಾಡಿ ಗ್ರಾಮದ ನಾಲ್ಕುನಾಡು ಅರಮನೆ ರಸ್ತೆಯಲ್ಲಿ ಕಾಡಾನೆ ಹಿಂಡುಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರು, ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ.ಈ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಒಂದು ಮರಿಯಾನೆ ಸೇರಿದಂತೆ 5 ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇಲ್ಲಿಯವರೆಗೆ ತೋಟಗಳಲ್ಲಿ ಮಾತ್ರ ಸಂಚರಿಸುತ್ತಿದ್ದ ಕಾಡಾನೆಗಳು ಗುರುವಾರ ರಾತ್ರಿ ಹಲವು ಲೈನ್ ಮನೆಗಳನ್ನು ಜಖಂಗೊಳಿಸಿ ಮನೆ ಸಮೀಪವೇ ಸುಳಿದಾಡುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಕಾಡಾನೆ ಇರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ಥಳಕ್ಕೆ ಆಗಮಿಸುತ್ತಿಲ್ಲ ಎಂದು ದೂರಿರುವ ಗ್ರಾಮಸ್ಥರಾದ ಪಾಂಡಂಡ ನರೇಶ್, ಬಡಕಡ ದೀನಾ ಪೂವಯ್ಯ, ಸುರೇಶ್ ಬೆಳ್ಯಪ್ಪ ಮತ್ತಿತರರು ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದರು.ಆದರೆ ಅದಕ್ಕೆ ಮೊದಲೇ ಎಂಬಂತೆ ಕಾರ್ಯಪ್ರವೃತ್ತರಾದ ನಾಪೆÇೀಕ್ಲು ವಲಯದ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯ ಕೈಗೊಂಡಿದ್ದಾರೆ. ಕಾಡಾನೆಗಳು ಪುನಃ ಕಾಡಿಗೆ ವಾಪಾಸಾಗುತ್ತವೆಯೋ? ಅಥವಾ ಕಾಫಿ ತೋಟಗಳಲ್ಲಿ ತಂಗುತ್ತವೆಯೋ ಎಂಬದನ್ನು ಕಾದು ನೋಡಬೇಕಾಗಿದೆ.

ಪ್ರವಾಸಿಗರಿಗೂ ಭೀತಿ: ಕಾಡಾನೆ ಹಾವಳಿ ನಾಲ್ಕುನಾಡು ಅರಮನೆಗೆ ಮತ್ತು ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೂ ಭೀತಿ ಮೂಡಿಸಿದೆ.

(ಮೊದಲ ಪುಟದಿಂದ) ಇತ್ತೀಚಿನ ದಿನಗಳಲ್ಲಿ ತಡಿಯಂಡ ಮೋಳ್ ಬೆಟ್ಟಕ್ಕೆ ಚಾರಣ ಮಾಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಡಾನೆಗಳಿರುವ ಬಗ್ಗೆ ಅರಣ್ಯ ಇಲಾಖೆ ಸೂಚನಾ ಫಲಕ ಕೂಡ ಅಳವಡಿಸಿಲ್ಲ. ಈ ಬಗ್ಗೆ ಯಾವದೇ ಅರಿವಿಲ್ಲದೆ ಸಾಗುತ್ತಿರುವ ಪ್ರವಾಸಿಗರಿಗೆ, ಚಾರಣಿಗರಿಗೆ ಕಾಡಾನೆ ಹಿಂಡು ಎದುರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಶಾಲೆ ಮಕ್ಕಳಿಗೂ ಕಾಡಾನೆ ಭೀತಿ: ಯವಕಪಾಡಿ, ನಾಲಡಿ ಮತ್ತು ಮರಂದೋಡ ಗ್ರಾಮಗಳಲ್ಲಿ ಗಿರಿಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಶಾಲೆಗೆ ತೆರಳಬೇಕಾದರೆ ಐದಾರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಸಂಜೆ ಮನೆ ತಲುಪುವ ವೇಳೆ ಕತ್ತಲಾವರಿಸುತ್ತಿರುತ್ತದೆ. ಈ ಕಾಡಾನೆ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಪರೀಕ್ಷೆ ಸಮಯವಾಗಿರುವದರಿಂದ ಪೆÇೀಷಕರು ಹೆಚ್ಚು ಚಿಂತೆಗೀಡಾಗಿದ್ದಾರೆ.

ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಪ್ರಭಾಕರ್