ಮಡಿಕೇರಿ, ಮಾ. 24: ದಿಡ್ಡಳ್ಳಿ ನಿರಾಶ್ರಿತರಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿದ್ದು, ಕೂಡಲೇ ಹಕ್ಕುಪತ್ರ ವಿತರಿಸಿ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂಲ ನಿವಾಸಿ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.

ಹಕ್ಕುಪತ್ರ ವಿತರಿಸಿದ ನಂತರ ಸಂಬಂಧಿಸಿದವರಿಂದ ಮನೆ ಮಂಜೂರಾತಿಗೆ ಅರ್ಜಿ ಪಡೆಯಲು ಮುಂದಾಗಬೇಕು. ಈಗಾಗಲೇ ಹಂಚಿಕೆಯಾಗಿರುವ ನಿವೇಶನ ಜಾಗದಲ್ಲಿ ಮೂಲಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಸ್ಥಳಾಂತರಗೊಂಡ ನಿರಾಶ್ರಿತ ಯುವಜನರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಬೇಕು. ಆ ನಿಟ್ಟಿನಲ್ಲಿ ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ಹಾಗೂ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳು ಕೈಜೋಡಿಸುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ದಿಡ್ಡಳ್ಳಿ ನಿರಾಶ್ರಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂಲ ಸೌಲಭ್ಯ ಕಲ್ಪಿಸಲು ಕ್ರಮವಹಿಸುವಂತೆ ಸಲಹೆ ಮಾಡಿದರು.

ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಮಾಹಿತಿ ನೀಡಿ ಈಗಾಗಲೇ ನಿವೇಶನ ಗುರುತಿಸಲಾಗಿರುವ ಕೆದಮುಳ್ಳೂರು, ಬಸವನಹಳ್ಳಿ, ರಾಂಪುರ ಜಾಗದಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ.ಮುಖ್ಯ ಯೋಜನಾ ನಿರ್ದೇಶಕ ಸಿದ್ದಲಿಂಗ ಮೂರ್ತಿ, ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್, ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಬ್ಬೀರ್ ಪಾಷ, ಐಟಿಡಿಪಿ ಇಲಾಖೆ ತಾಲೂಕು ಅಧಿಕಾರಿ ಚಂದ್ರಶೇಖರ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಸಚಿನ್ ಇತರರು ಇದ್ದರು.