ಮಡಿಕೇರಿ, ಮಾ. 24: ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನೆಲಸಿದ್ದರೆಂಬ ಕಾರಣದಿಂದಾಗಿ ಅಲ್ಲಿನ ಗುಡಿಸಲುಗಳನ್ನು ತೆರವುಗೊಳಿಸಿ ಸುಮಾರು ಎರಡೂವರೆ ತಿಂಗಳು ಕಳೆದಿವೆ. ಪ್ರತಿಭಟನೆ ಇದಕ್ಕೆ ವಿರುದ್ಧವಾದ ಪ್ರತಿಭಟನೆ ನಕ್ಸಲರು ಆಗಮಿಸಿದ್ದರೆಂಬ ವಿಚಾರದಿಂದಾಗಿ ಇದು ಇಡೀ ರಾಜ್ಯದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು.ಈ ವಿಚಾರ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಇದೇ ಸ್ಥಳದಲ್ಲಿ ನಿವೇಶನಬೇಕೆಂದು ಪಟ್ಟು ಹಿಡಿದು ಈಗಲೂ ಪ್ರತಿಭಟನೆ ಧ್ವನಿ ಮುಂದುವರಿದಿದೆ. ಈ ನಡುವೆ ಜಿಲ್ಲಾಡಳಿತ ನಿರಾಶ್ರಿತರಿಗೆ ಕೆಲವೆಡೆ ನಿವೇಶನ ವ್ಯವಸ್ಥೆ ಮಾಡಿ ಲಾಟರಿ ಮೂಲಕ ಹಂಚಿಕೆ ಮಾಡಿದ್ದರೂ ಇದಕ್ಕೆ ಪ್ರತಿಭಟನಾನಿರತರು ಇನ್ನೂ ಒಪ್ಪಿಕೊಂಡಂತಿಲ್ಲ. ಹಕ್ಕುಪತ್ರ ಸಿದ್ದವಾಗಿದ್ದು, ಗುರುತಿಸಿದ ನಿವೇಶನಕ್ಕೆ ತೆರಳುವಂತೆ ಜಿಲ್ಲಾಡಳಿತದ ಸೂಚನೆಯಂತೆ ಮನವೊಲಿಸಲು ಐಟಿಡಿಪಿ ಇಲಾಖೆ ಮೂಲಕ ಪ್ರಯತ್ನ ನಡೆಸಲು ಮುಂದಾಗಲಾಗಿದೆ.

ಏನಾಗಿದೆ.., ಏನಾಗುತ್ತಿದೆ?

ಗುಡಿಸಲು ತೆರವು ಬಳಿಕದ ನಂತರ ಪುನರ್ವಸತಿಗೆ ಕೋರಿ 610 ಅರ್ಜಿ ಐಟಿಡಿಪಿ ಇಲಾಖೆಗೆ ಸಲ್ಲಿಕೆಯಾಗಿದೆ. ಇದರಲ್ಲಿ 20 ಅರ್ಜಿದಾರರಿಗೆ ಈಗಾಗಲೇ ಮನೆ ಮಂಜೂರಾತಿ ಆಗಿರುವದರಿಂದ ಅವರನ್ನು ಪರಿಗಣಿಸಲಾಗಿಲ್ಲ. 528 ಮಂದಿ ಅಗತ್ಯ ದಾಖಲೆ ಒದಗಿಸಿದ್ದು, ಇವರನ್ನು ನಿವೇಶನಕ್ಕೆ ಪರಿಗಣಿಸಲಾಗಿದೆ. ಉಳಿದವರಿಗೆ ಕೊಡಗಿನ ಯಾವ ದಾಖಲಾತಿಯೂ ಇಲ್ಲದ ಕಾರಣ ಅನರ್ಹರಾಗಿದ್ದಾರೆ. ರಾಜ್ಯ ಸರಕಾರ ಈ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಅಗತ್ಯ ಸೌಲಭ್ಯ ನೀಡಲು ಆದೇಶಿಸಿದೆ.ಇದರಂತೆ ಜಿಲ್ಲಾಡಳಿತ ಈಗಾಗಲೇ ಮೂರು ಕಡೆಗಳಲ್ಲಿ ನಿವೇಶನ ಗುರುತು ಮಾಡಿದೆ.

ಪಡಿತರ, ಇತರ ಸೌಲಭ್ಯಕ್ಕೆ

ರೂ. 50 ಲಕ್ಷ

ರಾಜ್ಯ ಸರಕಾರ ಎರಡು ತಿಂಗಳ ಕಾಲ ದಿಡ್ಡಳ್ಳಿಯಲ್ಲಿನ ಈ ಮಂದಿಗೆ ಪಡಿತರ ನೀಡಲು ಆದೇಶಿಸಿದೆ. ಇದರಂತೆ ಕಳೆದ ಒಂದೂವರೆ ತಿಂಗಳಿನಿಂದ ಐಟಿಡಿಪಿ ಇಲಾಖೆ ಮೂಲಕ ಸೌಲಭ್ಯ ನೀಡಲಾಗುತ್ತಿದೆ.

ಕುಟುಂಬವೊಂದಕ್ಕೆ ವಾರಕ್ಕೆ ರೂ. 850 ವೆಚ್ಚದ ಪಡಿತರ ಒದಗಿಸಲಾಗುತ್ತಿದೆ. 15 ಕೆ.ಜಿ. ಅಕ್ಕಿ, ಳಿ ಕೆ.ಜಿ. ಸಕ್ಕರೆ, ಳಿ ಲೀಟರ್ ಎಣ್ಣೆ, ಳಿ ಕೆ.ಜಿ. ತೊಗರಿ ಬೇಳೆ, ಳಿ ಕೆ.ಜಿ. ಕಡಲೆ ಬೇಳೆ, ಕಾಫಿ ಪುಡಿ, ಮೆಣಸಿನ ಪುಡಿ, ಹುಣಸೆ, ಈರುಳ್ಳಿ, ಆಲೂಗಡ್ಡೆ, ಸಾಂಬಾರು ಪುಡಿ, ಉಪ್ಪು, ತರಕಾರಿ, ಸ್ನಾನದ ಸೋಪು ಹಾಗೂ ಬಟ್ಟೆ ಒಗೆಯುವ ಸೋಪು ಇದರಲ್ಲಿ ಸೇರಿದೆ. ಇದರೊಂದಿಗೆ 577 ಬ್ಲಾಂಕೆಟ್, 527 ಟಾರ್ಪಲ್, 225 ಸ್ವೆಟರ್‍ಗಳನ್ನು ವಿತರಿಸಲಾಗಿದೆ. ಸ್ಥಳದಲ್ಲಿ ನೀರು ಮತ್ತಿತರ ವ್ಯವಸ್ಥೆ ಸೇರಿ ಈ ತನಕ ಅಂದಾಜು ರೂ. 50 ಲಕ್ಷದಷ್ಟು ಹಣ ಇದಕ್ಕೆ ವಿನಿಯೋಗವಾಗಿದೆ. ಅಲ್ಲಿ ಈಗಲೂ ನಾಲ್ಕು ಸಿ.ಸಿ. ಕ್ಯಾಮರಾ ಹಾಗೂ ಒಂದು ಡಿಎಆರ್ ತುಕಡಿ ಕರ್ತವ್ಯದಲ್ಲಿವೆ ಎಂದು ಜಿಲ್ಲಾ ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.ನಿವೇಶನಕ್ಕೆ ರೂ. 5.71 ಕೋಟಿ

ಫಲಾನುಭವಿಗಳಿಗೆ ನೀಡಲು ಕಣಿವೆ ರಾಂಪುರ, ಬಸವನಹಳ್ಳಿ ಹಾಗೂ ಕೆದಮುಳ್ಳೂರಿನಲ್ಲಿ ನಿವೇಶನ ಗುರುತಿಸಲಾಗಿದೆ. ರಾಂ ಪುರದಲ್ಲಿ 171, ಕೆದಮುಳ್ಳೂರಿನಲ್ಲಿ 176 ಹಾಗೂ

(ಮೊದಲ ಪುಟದಿಂದ) ಬಸವನ ಹಳ್ಳಿಯಲ್ಲಿ 181 ನಿವೇಶನವನ್ನು ಜಿಲ್ಲಾಡಳಿತ ಗೊತ್ತು ಮಾಡಿದೆ. ನಿವೇಶನ ಸಿದ್ದಪಡಿಸುವ ಕೆಲಸವನ್ನು ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸಲಾಗುತ್ತಿದೆ. ನೆಲಸಮತಟ್ಟುಗೊಳಿಸುವದು, ರಸ್ತೆ, ಚರಂಡಿ, ಮೋರಿ, ನೀರು, ವಿದ್ಯುತ್ ಇಂತಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಂಡಿದೆ. ಮೂರು ಸ್ಥಳದಲ್ಲೂ ತಲಾ ಎರಡು ಬೋರ್‍ವೆಲ್ ಹಾಗೂ ತಲಾ ಎರಡು ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ವಿದ್ಯುತ್ ವ್ಯವಸ್ಥೆಗೆ ಕಂಬ ಅಳವಡಿಸಲಾಗುತ್ತಿದೆ.

ಬಸವನಹಳ್ಳಿ ನಿವೇಶನಕ್ಕೆ ರೂ. 1.94 ಕೋಟಿ, ರಾಂಪುರ ನಿವೇಶನಕ್ಕೆ ರೂ. 1.92 ಕೋಟಿ ಹಾಗೂ ಕೆದಮುಳ್ಳೂರಿಗೆ ರೂ. 1.85 ಕೋಟಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರಕಾರದಿಂದ ಇದಕ್ಕೆ ಮಂಜೂರಾತಿ ದೊರೆತಿದ್ದು, ಹಣ ಬಿಡುಗಡೆಯಷ್ಟೆ ಬಾಕಿ ಇದೆ. - ಶಶಿ