ಶನಿವಾರಸಂತೆ, ಮಾ. 24: ಶನಿವಾರಸಂತೆ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಮಾಡಲು ದುಂಡಳ್ಳಿ ಗ್ರಾಮ ಪಂಚಾಯಿತಿಯ ಸರ್ವೆ ನಂ. 42/2 ರಲ್ಲಿ 2 ಏಕರೆ ಪೈಸಾರಿ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿರುವದಕ್ಕೆ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಡಳ್ಳಿ ಗ್ರಾಮದ ಸರ್ವೆ ನಂ. 42/2 ರಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಜಿಲ್ಲಾಧಿಕಾರಿಗಳು ಕಸ ವಿಲೇವಾರಿ ಮಾಡಲು ಹಾಗೂ ಸ್ಮಶಾನಕ್ಕಾಗಿ ಮಂಜೂರು ಮಾಡಿದ್ದಾರೆ. ಇದರಿಂದ ಗ್ರಾಮದ ಜನತೆಗೆ ತೊಂದರೆಯಾಗಲಿದೆ. ಈ ಜಾಗ ಗ್ರಾಮದ ಹೃದಯ ಭಾಗದಲ್ಲಿದೆ. ಈಗ ಶನಿವಾರಸಂತೆ ಪಂಚಾಯಿತಿಗೆ ಕಸ ವಿಲೇವಾರಿಗೆ 2 ಏಕರೆ ಜಾಗ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿಗೆ 50 ಸೆಂಟ್ ಜಾಗ ಹಾಗೂ ಸ್ಮಶಾನಕ್ಕಾಗಿ 50 ಸೆಂಟ್ ಜಾಗವನ್ನು ನೀಡಿರುವದರಿಂದ ಗ್ರಾಮದ ಸ್ವಚ್ಛತೆ ಕೆಡಲಿದೆ. ಸಾಂಕ್ರಾಮಿಕ ರೋಗಗಳು ಉದ್ಭವಿಸುವ ಸಾಧ್ಯತೆ ಇದೆ. ಪಕ್ಕದಲ್ಲಿರುವ ಸರಕಾರಿ ಶಾಲಾ ಮಕ್ಕಳ ಆರೋಗ್ಯದ ಮೇಲೂ ಇದು ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಇದೆ.

ಈ ಜಾಗದ ಸುತ್ತಮುತ್ತ ಇನ್ನೂ 2 ಗ್ರಾಮದ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ಅವರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಬೇರೆ ಸ್ಥಳವನ್ನು ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಕುರಿತು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಉಪಾಧ್ಯಕ್ಷೆ ರೂಪಾ, ಸದಸ್ಯರುಗಳಾದ ಎನ್.ಕೆ. ಸುಮತಿ, ನೇತ್ರಾವತಿ, ಪಾರ್ವತಿ, ಕಮಲಮ್ಮ, ಬಿಂದಮ್ಮ, ಯೋಗೇಂದ್ರ, ಸಂತೋಷ್, ಹೂವಣ್ಣ, ಸಂದೇಶ್, ಮಾಜಿ ಉಪಾಧ್ಯಕ್ಷ ಕೆ.ಯು. ಸುಬ್ರಮಣಿ, ಗ್ರಾಮಸ್ಥರಾದ ತಮ್ಮೇಗೌಡ, ಪೂರ್ಣಿಮ, ವಸಂತ, ನಾಗೇಶ್, ಚಂದ್ರಶೇಖರ್, ನಾಗೇಶ್, ಲತಾ, ಮೋಟಮ್ಮ ಹಾಗೂ ಇತರರು ಲಿಖಿತ ಹೇಳಿಕೆ ನೀಡಿದ್ದಾರೆ.