ಮೂರ್ನಾಡು, ಮಾ. 24: ಕನ್ನಡ ಭಾಷೆಯ ಮೇಲೆ ಆಂಗ್ಲ ಹಾಗೂ ಇತರ ಭಾಷೆಗಳ ಧಾಳಿ ಹೆಚ್ಚುತ್ತಿದ್ದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಎಚ್ಚೆತ್ತುಕೊಳ್ಳಬೇಕು ಎಂದು ಮಡಿಕೇರಿ ತಾಲೂಕು ಕ.ಸಾಪ. ಅಧ್ಯಕ್ಷ ಕುಡೆಕಲ್ ಸಂತೋಷ್ ಹೇಳಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೂರ್ನಾಡು ಹೋಬಳಿ ಘಟಕದ ಸಹಯೋಗದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಕೆ.ಟಿ. ಸುಬ್ಬರಾವ್ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಸಮಾಜದಲ್ಲಿ ಆಂಗ್ಲ ಭಾಷೆ ಅನಿವಾರ್ಯ; ಆದರೆ ಮಾತೃ ಭಾಷೆ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿಕೊಂಡು ಹೋಗುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು. ಕನ್ನಡಿಗರಿಂದಲೇ ಕನ್ನಡಕ್ಕೆ ಧಕ್ಕೆಯಾಗುತ್ತಿದ್ದು, ನಮ್ಮ ಭಾಷೆಯನ್ನು ನಾವು ಪ್ರೀತಿಸಬೇಕೆಂದರು. ಸಾಹಿತ್ಯದಲ್ಲಿ ಕನ್ನಡ ಧೀಮಂತ ಭಾಷೆಯಾಗಿದ್ದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.
ಮೂರ್ನಾಡು ಪ್ರೌಢಶಾಲೆಯ ಸಹಶಿಕ್ಷಕ
(ಮೊದಲ ಪುಟದಿಂದ) ಎಸ್.ಡಿ. ಪ್ರಶಾಂತ್ ಕನ್ನಡ ಸಾಹಿತ್ಯದಲ್ಲಿ ಕೊಡಗು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಕರ್ನಾಟಕ ಸಾಹಿತ್ಯದಲ್ಲಿ ಕೊಡಗಿನ ಸಾಹಿತ್ಯ ಬೆಳೆದ ರೀತಿ, ಸಾಹಿತ್ಯಕ್ಕೆ ಕೊಡಗಿನ ಸಾಹಿತಿಗಳ ಸೇವೆಯ ಬಗ್ಗೆ ವಿವರಣೆ ನೀಡಿದರು.
ಕ.ಸ.ಪಾ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ.ಜೆ. ಪ್ರಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ.ಸಾ.ಪ. ಮೂರ್ನಾಡು ಹೋಬಳಿ ಘಟಕದ ಗೌ. ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ, ಕಾರ್ಯದರ್ಶಿ ರಾಜೇಶ್ವರಿ ಶಿವಾನಂದ್, ಕೋಶಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಹರೀಶ್ ಕಿಗ್ಗಾಲು, ಪೆಮ್ಮಯ್ಯ ರಮ್ಯ ಇತರರು ಹಾಜರಿದ್ದರು.