ಮಡಿಕೇರಿ, ಮಾ. 21 : ರಾಜ್ಯ ಸರ್ಕಾರ ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತಿರುವ ನಿರಾಶ್ರಿತರಿಗೆ ಇದೇ ಪ್ರದೇಶದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕುರಿತು ಭರವಸೆ ನೀಡಿದ್ದರೂ ಜಿಲ್ಲಾಡಳಿತ ಇಲ್ಲಿರುವವರನ್ನು ತರಾತುರಿಯಲ್ಲಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ. ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಮತ್ತು ಸರ್ಕಾರದ ಗಮನ ಸೆಳೆÉಯುವದಕ್ಕಾಗಿ ತಾ. 25 ರಂದು ಮಡಿಕೆÉೀರಿಯ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಪ್ರಮುಖ ಡಿ.ಎಸ್. ನಿರ್ವಾಣಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಕಳೆದ ನಂತರ ತಾ. 27 ರಂದು ವಿಶೇಷ ಸಭೆ ಕರೆದು ಚರ್ಚಿಸುವದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಅಲ್ಲದೆ, ದಿಡ್ಡಳ್ಳಿಯಲ್ಲಿರುವದು ಸಿ ಮತ್ತು ಡಿ ವರ್ಗದ ಭೂಮಿ ಎಂಬದಕ್ಕೆ ಸೂಕ್ತ ದಾಖಲೆ ನೀಡುವಂತೆ ತಿಳಿಸಿದ್ದರು. ಈ ದಾಖಲೆಗಳನ್ನು ನೀಡಲು ಸಮಿತಿಯು ತಯಾರಾಗಿದೆ. ಇಷ್ಟು ಬೆಳವಣಿಗೆಯ ಹಂತದಲ್ಲೆ ಜಿಲ್ಲಾಡಳಿತ ನಿರಾಶ್ರಿತರನ್ನು ಒಕ್ಕಲೆಬ್ಬಿಸಿ ಈಗಾಗಲೆ ಗುರುತಿಸಲಾಗಿರುವ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಮೂರು ಪ್ರದೇಶಗಳಲ್ಲಿ ಗುರುತಿಸಲಾಗಿರುವ ಜಾಗದಲ್ಲಿ 20x30 ಅಡಿ ಅಳತೆಯ ನಿವೇಶನ ನೀಡುವದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಅರಣ್ಯ ಪ್ರದೇಶದಲ್ಲಿ ಹುಟ್ಟಿ ಬೆಳೆದು, ವಿಶಾಲ ಪರಿಸರದಲ್ಲಿ ಜೀವನ ನಡೆಸುವ ಬುಡಕಟ್ಟು ಜನರಿಗೆ ಇಷ್ಟು ಸಣ್ಣ ಅಳತೆಯ ನಿವೇಶನ ಸಾಕೇ ಎಂದು ನಿರ್ವಾಣಪ್ಪ ಪ್ರಶ್ನಿಸಿದರು.
ತಾತ್ಕಾಲಿಕ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ನೀಡಿರುವ 1 ಕೋಟಿ ರೂ.ವನ್ನು ಜಿಲ್ಲಾಡಳಿತ ಪುನರ್ವಸತಿ ಪ್ರದೇಶದಲ್ಲಿ ವಿನಿಯೋಗಿಸುತ್ತಿರುವದು ಖಂಡನೀಯವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ದಿಡ್ಡಳ್ಳಿ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಮರಳಿಸದೆ ಇರುವದರಿಂದ ಸಮಸ್ಯೆ ಉದ್ಭವವಾಗಿದೆಯೆಂದು ಟೀಕಿಸಿದರು.
ಕಾಲ್ನಡಿಗೆ ಜಾಥಾಕ್ಕೆ ಚಾಲನೆ
ಮಾರ್ಚ್ 25 ರಂದು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ ವಿವಿಧ ಹಕ್ಕೊತ್ತಾಯಗಳಿಗಾಗಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡಲಾಗುವದು. ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಏ.7 ರಂದು ಡಿಡ್ಡಳ್ಳಿಯಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥ ನಡೆಸಲಾಗುವದೆಂದರು.
ಏ.14 ರಂದು ನಡೆಯುವ ಡಾ. ಅಂಬೇಡ್ಕರ್ ದಿನದಂದು ಬೆಂಗಳೂರಿಗೆ ತಲುಪುವ ರೀತಿಯಲ್ಲಿ 7 ದಿನಗಳ ಕಾಲ ಕಾಲ್ನಡಿಗೆ ಜಾಥ ನಡೆಯಲಿದೆಯೆಂದು ತಿಳಿಸಿದರು. ಏ.14 ರ ನಂತರ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಸಂಘÀಟನೆಗಳ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಬ್ದುಲ್ ಅಡ್ಕಾರ್, ಅಪ್ಪಾಜಿ, ಸ್ವಾಮಿ ಹಾಗೂ ರೈತ ಸಂಘÀದ ಎಸ್.ಆರ್. ಮಂಜುನಾಥ್ ಉಪಸ್ಥಿತರಿದ್ದರು.