ಸಿದ್ದಾಪುರ, ಮಾ. 21: ಸರಕಾರವು ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಗೆ ಸಹಾಯ ಧನ ನೀಡಬೇಕೆಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಒತ್ತಾಯಿಸಿದರು.
ಸಿದ್ದಾಪುರದಲ್ಲಿ ನಡೆಯಲಿರುವ ಕೊಡಗು ಚಾಂಪಿಯನ್ಸ್ ಲೀಗ್‍ನ 2ನೇ ಆವೃತ್ತಿಯ ಆಟಗಾರರ ಬಿಡ್ಡಿಂಗ್ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಅವಶ್ಯವಾಗಿದ್ದು, ಸರಕಾರ ಗ್ರಾಮೀಣ ಕ್ರೀಡಾಕೂಟಕ್ಕೆ ಸಹಾಯ ಧನ ಒದಗಿಸಬೇಕು. ಜಿಲ್ಲೆಯ ವಿವಿಧ ಸಂಘಟನೆಗಳು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳು ತ್ತಿದ್ದು, ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ರಾಜ್ಯದಲ್ಲಿಯೇ ಮೊದಲ ಬಾರಿಗೆ ಐ.ಪಿ.ಎಲ್ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಬಡ ಪ್ರತಿಭೆಗಳಿಗೆ ಕ್ರೀಡಾಕೂಟದಿಂದ ಅವಕಾಶ ದೊರೆಯಲಿದೆ. ಆಟಗಾರರನ್ನು ಬಿಡ್ಡಿಂಗ್ ಮೂಲಕ ಆರಿಸಿ ಕ್ರೀಡಾಕೂಟ ನಡೆಸುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಟಿ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಹ್ಯಾರಿಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಟಿ.ಜೆ. ಸಬಾಸ್ಟಿನ್, ವಿಜೇಶ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು ಇನ್ನಿತರರು ಇದ್ದರು. ಎಂ.ಎ ಅಜೀಜ್ ಸ್ವಾಗತಿಸಿ, ರೆಜಿತ್ ಕುಮಾರ್ ಗುಹ್ಯ ನಿರೂಪಿಸಿದರು.
ಸಂಕೇತ್ ಪೂವಯ್ಯ ಅವರು ಚೀಟಿ ಎತ್ತುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಕೆ.ಸಿ.ಎಲ್ ಬಿಡ್ಡಿಂಗ್‍ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 250 ಕ್ಕೂ ಹೆಚ್ಚು ಆಟಗಾರರು ಪಾಲ್ಗೊಂಡಿದ್ದರು. ಕೆ.ಸಿ.ಎಲ್. ಪಂದ್ಯಾವಳಿಯು ಏ.15 ರಿಂದ 20 ರವರೆಗೆ 6 ದಿನಗಳ ಕಾಲ ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.