ಗುಡ್ಡೆಹೊಸೂರು, ಮಾ. 22: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ವಿವಿಧ ಹೋಮ-ಹವನಗಳನ್ನು ನೆರವೇರಿಸಲಾಯಿತು. ಮುಂಜಾನೆ ಗಣಪತಿ ಹೋಮ ನಡೆಯಿತು.
ನೆಲಜಿಯ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಅರ್ಚಕರಾದ ರಮೇಶ್‍ಭಟ್ ಮತ್ತು ಕಾರ್ಕಳದ ಸದಾಶಿವ ಉಪಾಧ್ಯಾಯ ಅವರ ನೇತೃತ್ವದಲ್ಲಿ 11 ಅರ್ಚಕರ ತಂಡ ಈ ಹೋಮ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭ ಅತ್ತೂರು ಗ್ರಾಮಸ್ಥರು ಹಾಗೂ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮನೋಜ್ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.