ಭಾಗಮಂಡಲ, ಮಾ. 21: ಭಾಗಮಂಡಲ ವಾಹನ ಸುಂಕ ವಸೂಲಾತಿ ಹರಾಜಿನ ಬಗ್ಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಗ್ರಾ.ಪಂ. ನಡುವಿನ ಜಟಾಪಟಿ ಇಂದೂ ಮುಂದುವರಿದಿದೆ. ನಿನ್ನೆ ದಿನ ಭಾಗಮಂಡಲ ಪಂಚಾಯಿತಿ ಆಡಳಿತದಿಂದ ಮುಂದಿನ ಸಾಲಿಗೆ ವಾಹನ ಸುಂಕ ವಸೂಲಾತಿಗಾಗಿ ರೂ. 26 ಲಕ್ಷಕ್ಕೆ ಹರಾಜು ಅಧಿಕ ಮೊತ್ತಕ್ಕೆ ನೀಡಲ್ಪಟ್ಟಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಇಂದು ಮತ್ತೆ ದೇವಾಲಯ ಆಡಳಿತ ಮಂಡಳಿಯಿಂದ ಹರಾಜು ನÀಡೆದು ಕೇವಲ ರೂ. 8 ಲಕ್ಷ ಅರವತ್ತೊಂದು ಸಾವಿರದ ಐದು ನೂರಕ್ಕೆ ಹರಾಜು ನೀಡಲ್ಪಟ್ಟಿತ್ತು. ಇದರಿಂದಾಗಿ ಪಂಚಾಯಿತಿಯಿಂದ ನಡೆದ ಹರಾಜಿಗೂ, ದೇವಾಲಯ ಆಡಳಿತ ನಡೆಸಿದ ಹರಾಜಿಗೂ ರೂ. 18 ಲಕ್ಷದಷ್ಟು ವ್ಯತ್ಯಾಸ ಕಂಡು ಬಂದಿದೆ.
ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಭಾಗಮಂಡಲ ದೇವಾಲಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಹರಾಜು ಏರ್ಪಟ್ಟಿತ್ತು. ಆ ಸಂದರ್ಭ ದೇವಾಲಯಕ್ಕೆ ಆಗಮಿಸಿದ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಹಾಗೂ ಇತರ ಸದಸ್ಯರು,
(ಮೊದಲ ಪುಟದಿಂದ) ಕಾ.ನಿ. ಅಧಿಕಾರಿಗೆ ರಾಜ್ಯ ಉಚ್ಛ ನ್ಯಾಯಾಲಯದ ತಾತ್ಕಾಲಿಕ ಆದೇಶ ಪ್ರತಿ ನೀಡಿದರು.
ಈ ಆದೇಶದನ್ವಯ ಹರಾಜಿನ ವಿಚಾರದಲ್ಲಿ ಈ ಹಿಂದಿನ ಯಥಾ ಸ್ಥಿತಿಯನ್ನು ಮುಂದುವರೆಸಲು ಸ್ಪಷ್ಟವಾಗಿ ನಿರ್ದೇಶಿಸಲಾಗಿತ್ತು. ಅಂದರೆ ಭಾಗಮಂಡಲ ಪಂಚಾಯಿತಿ ಮೂಲಕವೇ ಹರಾಜನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಈ ಆದೇಶದ ಪ್ರತಿಯನ್ನು ನೋಡಿದ ಬಳಿಕ ಜಗದೀಶ್ ಕುಮಾರ್ ಅವರು ಹರಾಜು ಪ್ರಕ್ರಿಯೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಮಧ್ಯಾಹ್ನ ನಡೆದ ಹರಾಜಿನಲ್ಲಿ 6 ಮಂದಿ ಭಾಗವಹಿಸಿದ್ದು, ಆ ಪೈಕಿ ಚೇರಂಗಾಲದ ಪೂಣಚ್ಚ ಅವರು ದೇವಾಲಯದ ಆಡಳಿತ ಮಂಡಳಿ ಮೂಲಕ ವಾಹನ ನಿಲುಗಡೆ ಸುಂಕದ ಹಕ್ಕು ಪಡೆದುಕೊಂಡರು. ಆಶ್ಚರ್ಯವೆಂದರೆ ನಿನ್ನೆ ದಿನ ಪಂಚಾಯಿತಿ ನಡೆಸಿದ ಹರಾಜಿನಲ್ಲಿ 18 ಮಂದಿ ಪಾಲ್ಗೊಂಡು; ಇಂದು ದೇವಾಲಯ ನಡೆಸಿದ ಹರಾಜಿನಲ್ಲಿ ಕೇವಲ 6 ಮಂದಿ ಪಾಲ್ಗೊಂಡು; ಇವರೆಲ್ಲರೂ ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡವ ರಾಗಿದ್ದಾರೆ.