ಭಾಗಮಂಡಲ, ಮಾ. 22: ಭಾಗಮಂಡಲದಲ್ಲಿ ವಾಹನ ನಿಲುಗಡೆ ಸುಂಕದ ಬಗ್ಗೆ ಸ್ಥಳೀಯ ಗ್ರಾ.ಪಂ. ಕೈಗೊಂಡಿರುವ ನಿರ್ಣಯವನ್ನು ಜಿಲ್ಲಾಧಿಕಾರಿಗಳು ಬೆಂಬಲಿಸುವಂತೆ ಗ್ರಾ.ಪಂ. ಮಾಜಿ ಸದಸ್ಯ ಹಾಗೂ ಬಿ.ಜೆ.ಪಿ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಒತ್ತಾಯಿಸಿದ್ದಾರೆ. ವಾಹನ ನಿಲುಗಡೆ ಸುಂಕ ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ರವಿ, ಈ ಕೆಳಗಿನಂತೆ ಹೇಳಿಕೆಯೊಂದಿಗೆ ಜಿಲ್ಲಾಧಿಕಾರಿಗಳ ಗಮನಸೆಳೆದಿದ್ದಾರೆ.

ದೇವಾಲಯದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ವಾಹನ ನಿಲುಗಡೆ ಶುಲ್ಕದ ಬಗ್ಗೆ ಭಾಗಮಂಡಲಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಪಂಚಾಯಿತಿಗೆ ದಿನನಿನ್ಯದ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ವೆಚ್ಚ ನಿರ್ವಹಿಸಲು ಸರಕಾರದಿಂದ ಬರುವಂತಹ ಅನುದಾನದಲ್ಲಿ ಕಷ್ಟಸಾಧ್ಯವಾಗಿದೆ. ವಾಹನ ಸುಂಕ ವಸೂಲಾತಿಯಿಂದ ದಿನನಿತ್ಯದ ಶುಚಿತ್ವವನ್ನು ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಏಕಾಏಕಿ ಜಿಲ್ಲಾಧಿಕಾರಿಗಳು ಪಂಚಾಯಿತಿಯ ಅಧಿಕಾರವನ್ನು ಮೊಟಕುಗೊಳಿಸಿ ಅಧಿಕಾರ ಚಲಾಯಿಸಿರುವದು ಸರಿಯಲ್ಲ. ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಒಂದೆಡೆ ಸೇರಿಸಿ ವಾಹನ ಸುಂಕ ವಸೂಲಾತಿಯ ಬಗ್ಗೆ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ದೇವಸ್ಥಾನ ಆಡಳಿತಾಧಿಕಾರಿಯವರ ಸಮ್ಮುಖ ಯಾರದೋ ಮಾತಿಗೆ ಮರುಳಾಗಿ ಈ ನಿರ್ಣಯ ಕೈಗೊಂಡಿರಬಹುದು. ಭಾಗಮಂಡಲ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರು ತಂದಿರುವ ಉಚ್ಛ ನ್ಯಾಯಾಲಯದ ತಡೆಯಾಜ್ಞೆಗೆ ಬೆಲೆ ಕೊಡದೆ ದೇವಸ್ಥಾನದ ಆಡಳಿತಾಧಿಕಾರಿಯವರು ವಾಹನ ನಿಲುಗಡೆ ಶುಲ್ಕದ ಮರು ಟೆಂಡರ್ ಕರೆದಿರುವದು ಸರಿಯಲ್ಲ.

ಈ ಮೊದಲು ಜಾತ್ರಾ ಪ್ರಯುಕ್ತ ನಡೆದ ವಿಶೇಷ ಸಭೆಗಳಲ್ಲಿ ದೇವಸ್ಥಾನದ ಕೆಲವು ಕಾಮಗಾರಿಗಳಲ್ಲಿ ಒಂದಾದ ದೇವಾಲಯ ಮುಖ್ಯ ದ್ವಾರದ ಬಾಗಿಲನ್ನು ಮಾಡಿಸಲು ಮನವಿ ಮಾಡಿಕೊಂಡರೂ, ಈತನಕ ಕೆಲಸ ಕೈಗೊಂಡಿರುವದಿಲ್ಲ. ದೇವಾಲಯದಲ್ಲಿ ಬೇಕಾದಷ್ಟು ಹಣವಿದ್ದರೂ ದೇವರ ನೈವೇದ್ಯದ ಕೊಠಡಿ ಮತ್ತು ಒಳಾಂಗಣ ಸೋರುತ್ತಿದ್ದು, ಹಲವು ಬಾರಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಯಾವದೇ ಕಾಮಗಾರಿಯನ್ನು ಕೈಗೊಂಡಿಲ್ಲ. ಇವರು ಪಂಚಾಯಿತಿ ಅಭಿವೃದ್ಧಿ ಕಾರ್ಯಗಳನ್ನು ಮೊಟಕುಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಯಿಂದ ಮಾಡಿರುವ ಟೆಂಡರ್‍ಗೆ ಜಿಲ್ಲಾಧಿಕಾರಿ ಯಾರ ಮಾತಿಗೂ ಮಣೆ ಹಾಕದೆ, ಅಭಿವೃದ್ಧಿ ಕೆಲಸಕ್ಕೆ ಬೆಂಬಲ ನೀಡಬೇಕಾಗಿ ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರು, ಸದಸ್ಯರೊಂದಿಗೆ ಸಾರ್ವಜನಿಕರ ಪರವಾಗಿ ತಾನು ಆಗ್ರಹಪಡಿಸುವದಾಗಿ ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.