ಕುಶಾಲನಗರ, ಮಾ. 21: ಕುಶಾಲನಗರವನ್ನು ಕೇಂದ್ರವಾಗಿರಿಸಿ ನೂತನ ತಾಲೂಕು ರಚಿಸುವ ಸಂಬಂಧ ಸ್ಥಳೀಯ ವಾಸ್ತವ ಅಂಶಗಳ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮಕೈಗೊಳ್ಳ ಲಾಗುವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಕುಶಾಲನಗರದಿಂದ ಬೆಂಗಳೂರಿಗೆ ನಿಯೋಗ ತೆರಳಿದ ಕಾವೇರಿ ತಾಲೂಕು ಹೋರಾಟ ಸಮಿತಿ ಪ್ರಮುಖರು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಭೇಟಿ ಮಾಡಿ ಕುಶಾಲನಗರ ತಾಲೂಕು ರಚನೆಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಈಗಾಗಲೇ ಹಲವು ನೂತನ ತಾಲೂಕುಗಳನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ. ಕುಶಾಲನಗರವನ್ನು ನೂತನ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ನಿಯೋಗ ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೆಪಿಸಿಸಿ ಕಾರ್ಯಾಧ್ಯಕ್ಷರು ಆದ ದಿನೇಶ್ ಗುಂಡೂರಾವ್ ಕೂಡ ಕುಶಾಲನಗರ ತಾಲೂಕು ರಚಿಸುವ ಕುರಿತಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಕೊಡಗಿನ ಶಾಸಕರಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರು ಕೂಡ ಮುಖ್ಯಮಂತ್ರಿಗಳ ಗಮನ ಸೆಳೆದರು. ಪಂಚಾಯಿತಿ ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ಹೆಚ್.ಜೆ. ಕರಿಯಪ್ಪ, ನಂಜುಂಡಸ್ವಾಮಿ, ಮಧುಸೂದನ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಎನ್.ಕೆ. ಮೋಹನ್‍ಕುಮಾರ್, ಕೆ.ಎಸ್. ರಾಜಶೇಖರ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಶಿವಾಜಿ, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್ ಮತ್ತಿತರರು ಇದ್ದರು.