ಶನಿವಾರಸಂತೆ, ಮಾ. 21: ಶನಿವಾರಸಂತೆ ಗ್ರಾಮ ಪಂಚಾಯಿತಿ ಕೋಳಿ ಹಾಗೂ ಮಾಂಸದ ಅಂಗಡಿಗಳನ್ನು ಸಂತೆ ಮಾರುಕಟ್ಟೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಇಂದು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರಬಣ) ಯವರಿಗೂ, ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಕೋಳಿ ಅಂಗಡಿ ಮಾಲೀಕರಿಗೂ ಸಾರ್ವಜನಿಕರಿಗೂ ಮಾತಿನ ಚಕಮಖಿ ನಡೆದು ಪೊಲೀಸರ ಮಧ್ಯಪ್ರವೇಶಿಸಿ ಕರ್ನಾಟಕ ರಕ್ಷಣ ವೇದಿಕೆಯವರನ್ನು ಪಂಚಾಯಿತಿ ಕಛೇರಿ ಆವರಣದಿಂದ ಹೊರಕಳುಹಿಸಿದ ಘಟನೆ ನಡೆಯಿತು.

ಪ್ರತಿಭಟನೆ ನಿರತವಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರುಗಳಾದ ಮೋಹನ್, ಭೂಪಾಲ್ ಹಾಗೂ ವೇದಿಕೆಯ ಸದಸ್ಯರುಗಳಾದ ರವಿ, ಶೂಭಾನ್, ಹಾಗೂ ಇತರರು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ಧಿಕ್ಕಾರ ಹಾಕಿದರು. ಇದರಿಂದ ರೊಚ್ಚಿಗೆದ್ದ ಪಂಚಾಯಿತಿ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರುಗಳಿಗೂ ಮಾತಿನ ಚಕಮುಖಿ ನಡೆದು ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಹರಾಜು ಪ್ರಕ್ರಿಯೆಯಲ್ಲಿ ಕೋಳಿ ಮಾಂಸದ ಅಂಗಡಿಗಳನ್ನು ಹರಾಜು ಮಾಡುವದಿಲ್ಲ ಎಂದು ಆಡಳಿತ ಮಂಡಳಿಯವರು ಉತ್ತರಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಬೇಡಿ ನಮ್ಮ ಕೆಲಸಕ್ಕೆ ತೊಂದರೆ ಕೊಡಬೇಡಿ, ಹೊರಗಡೆ ಹೋಗಿ, ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಷ್ಟರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಹೊರ ಕಳುಹಿಸಿದರು.