ಮಡಿಕೇರಿ, ಮಾ. 20: ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ವಲಯದ ಆತಂಕ ಮುಂದುವರಿಯುತ್ತಲೆ ಇದ್ದು, ಈ ಬಗ್ಗೆ ಸ್ಪಷ್ಟ ನಿಲುವನ್ನು ತಾಳದ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿವಾದದ ಕುರಿತು ಆಕ್ಷೇಪಣೆ ಸಲ್ಲಿಸಬೇಕೆಂದು ಪುಷ್ಪಗಿರಿ ಮೂಲ ನಿವಾಸಿಗಳ ಸಂಘÀ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್, ಕೊಡಗಿನ 55 ಗ್ರಾಮಗಳನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಸೇರ್ಪಡೆಗೊಳಿಸಿದ್ದು, ಇವುಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಮೂಲ ನಿವಾಸಿಗಳು ಅನಾದಿ ಕಾಲದಿಂದಲೂ ನೆಲೆ ನಿಂತಿದ್ದಾರೆ. ಇವರಿಂದ ಪರಿಸರ ರಕ್ಷಣೆÉಯಾಗಿ ದೆಯೇ ಹೊರತು ಎಲ್ಲೂ ನಾಶವಾಗಿಲ್ಲವೆಂದು ಅಭಿಪ್ರಾಯ ಪಟ್ಟರು.
ವಾಸದ ಹಕ್ಕನ್ನು ಕಸಿದು ಕೊಳ್ಳುವದು ಸರಿಯಲ್ಲವೆಂದ ಅವರು, ಮೂಲನಿವಾಸಿಗಳು ಪರಿಸರವನ್ನು ನಾಶ ಮಾಡದಿದ್ದರು ಸೂಕ್ಷ್ಮ ಪರಿಸರ ವಲಯದ ನೆಪದಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು. ಮೂಲಭೂತ ಹಕ್ಕುಗಳ ರಕ್ಷಣೆ ಮಾಡದೆ, ಮೂಲಭೂತ ಸೌಲಭ್ಯಗಳನ್ನು ನೀಡದೆ ಪಶ್ಚಿಮ ಘಟ್ಟ ಪ್ರದೇಶದ ಗಾಮೀಣ ಭಾಗದ ಜನರ ಅಸ್ತಿತ್ವವನ್ನು ನಾಶಮಾಡಲು ಹೊರಟಿರುವದು ಖಂಡನೀಯ ವೆಂದರು.
ಡಾ. ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖಿಸಿರುವ ಪರಿಸರ ಸಂರಕ್ಷಣೆಯ ಪೂರಕ ಅಂಶಗಳನ್ನು ಎತ್ತಿಹಿಡಿದು ಮಾರಕಾಂಶಗಳನ್ನು ಕೈಬಿಡಲು ಜಿಲ್ಲಾಡಳಿತ ಸೂಕ್ತ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ವಿವಾದವನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳದೆ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸ ಬೇಕಾಗಿದೆ. ಜವಾಬ್ದಾರಿಯಿಂದ ನುಣುಚಿಕೊಂಡು ಆಕ್ಷೇಪಣೆ ಸಲ್ಲಿಸಲು ಸಾಧ್ಯವಿಲ್ಲದ ಜನ ಪ್ರತಿನಿಧಿಗಳು ಗೌರವಯುತವಾಗಿ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕೆಂದು ಎಂ.ಎಸ್. ಚಂದ್ರಶೇಖರ್ ಒತ್ತಾಯಿಸಿದರು.
ಡಾ| ಕಸ್ತೂರಿ ರಂಗನ್ ವರದಿ ಕಠಿಣವಾಗಿ ಜಾರಿಯಾದಲ್ಲಿ ಇದರ ಸಂಪೂರ್ಣ ಹೊಣೆÉಯನ್ನು ಜಿಲ್ಲೆಯ ಜನಪ್ರತಿನಿಧಿಗಳೇ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ವಿವಾದಿತ ವರದಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಜನರನ್ನು ಮುಕ್ತಿ ಗೊಳಿಸುವಂತೆ ಒತ್ತಾಯಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಟಿ. ದಿನೇಶ್, ಪ್ರಮುಖರಾದ ಗಣೇಶ್ ಕುಮಾರ್, ಎ.ಕೆ. ಚಂಗಪ್ಪ, ಜೆ. ಬಿದ್ದಪ್ಪ ಹಾಗೂ ಎಂ.ಎಸ್. ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.