ದೆಹಲಿ ಮೇಲೆ ಧಾಳಿ ನಡೆಸಲು ಲಷ್ಕರ್ ಸಂಚು ನವದೆಹಲಿ, ಮಾ.20 : ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಪೇಶಾವರದ ಸೈನಿಕ ಶಾಲೆ ಮೇಲೆ ನಡೆದಿದ್ದ ಭೀಕರ ದಾಳಿ ಮಾದರಿಯಲ್ಲೇ ಭಾರತದ ರಾಜಧಾನಿ ದೆಹಲಿಯಲ್ಲೂ ದಾಳಿ ನಡೆಸಲು ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತಯ್ಬಾ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಲಷ್ಕರ್ ಸಂಘಟನೆಯ ಓರ್ವ ಉಗ್ರನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ಈ ನಡುವೆಯೇ ಗುಪ್ತಚರ ದಳಕ್ಕೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಭಾರತದಲ್ಲಿ ಮತ್ತೆ ಕಾರ್ಯ ಪ್ರವೃತ್ತರಾಗಿರುವ ಲಷ್ಕರ್ ಉಗ್ರ ಸಂಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದ ಸೈನಿಕ ಶಾಲೆ ಮೇಲಿನ ಧಾಳಿ ಮಾದರಿಯಲ್ಲೇ ದೆಹಲಿಯಲ್ಲೂ ಧಾಳಿ ನಡೆಸಲು ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ಗುಪ್ತಚರ ಮೂಲಗಳ ಪ್ರಕಾರ ಈಗಾಗಲೇ ಲಷ್ಕರ್ ಉಗ್ರರನ್ನು ಈ ಕೆಲಸಕ್ಕಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಗುಪ್ತಚರ ಅಧಿಕಾರಿಗಳು ಈ ವಿಚಾರವನ್ನು ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದು, ದೆಹಲಿಯ ಎಲ್ಲ ಶಾಲಾ-ಕಾಲೇಜುಗಳ ಬಳಿ ಭದ್ರತೆ ಬಿಗಿಗೊಳಿಸಲಾಗಿದೆ. ಅಂತೆಯೇ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವಂತೆ ಸ್ಥಳೀಯ ಪೆÇಲೀಸ್ ಠಾಣೆಗಳಿಗೆ ನಿರ್ದೇಶನ ಕೂಡ ನೀಡಲಾಗಿದೆ.

ಸೇನಾ ನೆಲೆಗೆ ಧಾಳಿ : 14 ಸಾವು

ಕಾಬೂಲ್ ಮಾ.20 : ಆಫ್ಘಾನಿಸ್ಥಾನದ ಉರುಜ್‍ಗನ್ ಪ್ರಾಂತ್ಯದ ಸೇನಾ ನೆಲೆಯಲ್ಲಿ ನಡೆದ ಉಗ್ರ ದಾಳಿ ಮತ್ತು ನಂತರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಮತ್ತು 11 ಜನ ಉಗ್ರರು ಹತ್ಯೆಯಾಗಿದ್ದಾರೆ ಎಂದು ಸೋಮವಾರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. "ತಿರಿನ್ ಕೋಟ್ ಜಿಲ್ಲೆಯ ಸೇನಾ ನೆಲೆಯ ಮೇಲೆ ಶಸ್ತ್ರಸಜ್ಜಿತ ಹಲವು ಉಗ್ರರು ಭಾನುವಾರ ರಾತ್ರಿ ದಾಳಿ ನಡೆಸಿದರು" ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿದ್ದಾರೆ. ಈ ಉಗ್ರರು ತಾಲಿಬಾನ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಕೂಡ ಅವರು ತಿಳಿಸಿದ್ದಾರೆ. ಸೋಮವಾರ ಬೆಳಗಿನ ಜಾವ ಹೆಚ್ಚುವರಿ ಭದ್ರತಾ ಪಡೆ ಆಗಮಿಸುವವರೆಗೆ ಈ ಭಯೋತ್ಪಾದಕರು ಸೇನಾ ನೆಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು ಎಂದು ಕೂಡ ತಿಳಿಯಲಾಗಿದೆ. ಈ ದಾಳಿಯಲ್ಲಿ ಉಗ್ರರು ಕೆಲವು ಸೈನಿಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಕೂಡ ಅಧಿಕಾರಿ ಹೇಳಿದ್ದಾರೆ. "ಈ ನೆಲೆಯ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚುವರಿ ಭದ್ರತಾ ಪಡೆ ಪ್ರರಾಂಭಿಸಿದ್ದು, ವಶಪಡಿಸಿಕೊಂಡಿರುವ ಯೋಧರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ಮುಂದುವರೆದಿದೆ" ಎಂದು ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ 279 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಪತ್ತೆ

ನವದೆಹಲಿ, ಮಾ.20 : ರಾಷ್ಟ್ರ ರಾಜಧಾನಿ ಈಗ ನಕಲಿ ರಾಜಧಾನಿಯಾಗುತ್ತಿದ್ದು, ದೆಹಲಿಯ 66 ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ 279 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹಾಗೂ 23 ನಕಲಿ ವಿಶ್ವವಿದ್ಯಾಲಯಗಳನ್ನು ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಗುರುತಿಸಿದೆ. ಪರವಾನಗಿ ಪಡೆಯದೆ ಈ 279 ಕಾಲೇಜ್ ಗಳು ಪದವಿ ಪ್ರಧಾನ ಮಾಡುವ ಯಾವದೇ ಅರ್ಹತೆಯನ್ನು ಹೊಂದಿಲ್ಲ. ಈ ಸಂಸ್ಥೆಗಳು ನೀಡುವ ಪ್ರಮಾಣ ಪತ್ರ ಕೇವಲ `ತುಂಡು ಕಾಗದ' ಅಷ್ಟೇ. ಸರ್ಕಾರದಿಂದ ಇದಕ್ಕೆ ಯಾವದೇ ಮಾನ್ಯತೆ ಇರುವುದಿಲ್ಲ. ಹೀಗಾಗಿ ಈ ಹಿಂದೇಯ ಯುಜಿಸಿ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧಿಕೃತ ವೆಬ್ಸೈಟ್ಗಳಲ್ಲಿ ನಕಲಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳು ಈ ಕುರಿತು ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ದೆಹಲಿಯ 7 ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದಲ್ಲಿ ಒಟ್ಟು 23 ನಕಲಿ ವಿಶ್ವವಿದ್ಯಾಲಯಗಳಿದ್ದು, ಇಂಜಿನಿಯರಿಂಗ್ ಸೇರಿದಂತೆ ಇತರೆ ತಾಂತ್ರಿಕ ಕೋಸ್ರ್ಗಳನ್ನು ನೀಡುತ್ತಿರುವ 279 ನಕಲಿ ಸಂಸ್ಥೆಗಳ ಪೈಕಿ 66 ಕಾಲೇಜುಗಳು ದೆಹಲಿಯಲ್ಲಿವೆ. ಅನಧಿಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನಿಗದಿತ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂರನೇ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯ

ರಾಂಚಿ, ಮಾ.20 : ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿದೆ. ಐದನೇ ದಿನವಾದ ಇಂದು ಯಾವುದೇ ಫಲಿತಾಂಶ ಕಾಣದೆ ಡ್ರಾನಲ್ಲಿ ಅಂತ್ಯಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 451 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 603 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡು ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದು ಪಂದ್ಯ ಡ್ರಾಗೊಂಡಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದು, ನಾಲ್ಕನೇ ಟೆಸ್ಟ್ ಮಾ.25ರಿಂದ ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.

ಮಹಿಳಾ ಮೀಸಲಾತಿ ಮಸೂದೆಗಾಗಿ ಡಿಎಂಕೆ ಪ್ರತಿಭಟನೆ

ನವದೆಹಲಿ, ಮಾ.20 : ಮಹಿಳಾ ಮೀಸಲಾತಿ ಮಸೂದೆಯನ್ನು ಕೂಡಲೇ ಅಂಗೀಕರಿಸಬೇಕು ಎಂದು ಒತ್ತಾಯಿಸಿ ರಾಜ್ಯಸಭಾ ಸದಸ್ಯೆ ಕನಿಮೋಳಿ ನೇತೃತ್ವದಲ್ಲಿ ಸೋಮವಾರ ಡಿಎಂಕೆ ಸದಸ್ಯರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಕನಿಮೋಳಿ, ಲೋಕಸಭೆಯಲ್ಲಿ ಹಾಗೂ ರಾಜ್ಯದ ಎಲ್ಲಾ ವಿಧಾನಸಭೆಯಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಹಿಳಾ ಮಸೂದೆಯನ್ನು ಇದುವರೆಗೂ ಏಕೆ ಅಂಗೀಕರಿಸಿಲ್ಲ? ಕಳೆದ 20 ವರ್ಷಗಳಿಂದ ಬಾಕಿ ಉಳಿದದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಇದುವರೆಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಮಾಧ್ಯಮ ಸಹ ಈ ಬಗ್ಗೆ ಯಾವದೇ ಗಮನ ಹರಿಸುತ್ತಿಲ್ಲ. ಹೀಗಾಗಿ ನಾವು ಈ ಬಗ್ಗೆ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದು, ಮಹಿಳಾ ಮಸೂದೆ ಬೆಂಬಲಿಸುವ ಎಲ್ಲಾ ಸಮಾನ ಮನಸ್ಕ ಪಕ್ಷಗಳು ನಮ್ಮೊಂದಿಗೆ ಕೈಜೋಡಿಸಲಿ ಎಂದು ಕನಿಮೋಳಿ ಹೇಳಿದ್ದಾರೆ.

ಪಾಕ್ ಬಗ್ಗೆ ನಾಪತ್ತೆಯಾಗಿದ್ದ ಮೌಲ್ವಿಗಳ ಅಸಮಾಧಾನ

ನವದೆಹಲಿ, ಮಾ.20 : ಮುಗ್ಧ ಭಾರತೀಯರ ವಿರುದ್ಧ ಪಾಕಿಸ್ತಾನ ಸರ್ಕಾರ ಯಾವ ರೀತಿಯಾಗಿ ಪಿತೂರಿ ನಡೆಸಲಿದೆ ಎಂಬ ಸುಳಿವನ್ನು ನಾಪತ್ತೆಯಾಗಿದ್ದ ಭಾರತೀಯ ಮೌಲ್ವಿಗಳು ಸೋಮವಾರ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೌಲ್ವಿ ನಿಜೀಮ್ ನಿಜಾಮಿ ಅವರು ಪಾಕಿಸ್ತಾನದಲ್ಲಿ ತಮಗಾದ ಅನುಭವಗಳನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳು ನಮ್ಮನ್ನು ಭಾರತದ ರಿಸರ್ಚ್ ಆಯಂಡ್ ಅನಲೈಸಿಸ್ ವಿಂಗ್ (ರಾ) ಏಜೆಂಟ್ ಎಂದು ಬಿಂಬಿಸಿದ್ದವು ಎಂದು ನಿಜೀನ್ ನಿಜಾಮಿ ಅವರು ಹೇಳಿದ್ದಾರೆ. ನಾವು ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ ವೇಳೆ ಪತ್ರಿಕೆ ಸುಳ್ಳು ಸುದ್ದಿಯನ್ನು, ಹೇಳಿಕೆಗಳನ್ನು ಪ್ರಕಟಿಸಿತ್ತು. ನಮ್ಮ ಭಾವಚಿತ್ರಗಳನ್ನು ಪ್ರಕಟಿಸಿದ್ದ ಪತ್ರಿಕೆ ನಾವು ರಾ ಏಜೆಂಟ್'ಗಳಾಗಿದ್ದೆವೆಂದು ಹೇಳಿಕೊಂಡಿದ್ದವು. ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಶ್ರಮದಿಂದಾಗಿ ನಾವು ಭಾರತಕ್ಕೆ ಹಿಂದಿರುಗಿ ಬಂದಿದ್ದೇವೆ. ಎಲ್ಲರಿಗೂ ಈ ಮೂಲಕ ಧನ್ಯವಾದ ಹೇಳಲು ಇಚ್ಛಿಸುತ್ತೇನೆಂದು ನಿಜಾಮಿಯವರು ತಿಳಿಸಿದ್ದಾರೆ.