ಮಾ. 20: ಪೊನ್ನಂಪೇಟೆ ಸಮೀಪದ ಶ್ರೀ ಕಾಡ್ಲಯ್ಯಪ್ಪ ದೇವರ ವಾರ್ಷಿಕೋತ್ಸವ ವಿಜೃಂಭಣೆಯಿಂದ ವೆರವೇರಿತು. ತಾ. 4 ರಂದು ಹಬ್ಬದ ಕಟ್ಟು ಬೀಳುವದರೊಂದಿಗೆ, ಗ್ರಾಮಸ್ಥರು ಕಟ್ಟು ಕಟ್ಟಳೆ ಮೀರದೆ ಶುದ್ಧ ಮನಸ್ಸಿನಿಂದ ವ್ರತಧಾರಿಗಳಂತೆ ನಡೆದುಕೊಂಡು, ಕಳೆದೆರಡು ದಿವಸ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರೆಯಿತು.ಹಿಂದಿನ ಪರಂಪರೆಯಂತೆ ಕಾಡ್ಯಮಾಡ ಕುಟುಂಬಸ್ಥರು, ಜಮ್ಮಡ ಹಾಗೂ ಗುಮ್ಮಟ್ಟಿರ ಕುಟುಂಬಸ್ಥರು, ಅಚ್ಚಿಯಂಡ ಕುಟುಂಬಸ್ಥರ ಉಸ್ತುವಾರಿಯಲ್ಲಿ ದೇವತಾ ಕಾರ್ಯ ಗಳನ್ನು ನಡೆಸಲಾಯಿತು. ವಿವಿಧ ದೈವಗಳ ಕೋಲ (ತೆರೆ)ಗಳು ಜರುಗಿದವು. ಹೊಸ ವರ್ಷದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ, ಹಣ್ಣು, ಹಾಲು ಸಹಿತ ಸಿಹಿ ಪಾಯಸ ತಯಾರಿಸಿ ದೇವರಿಗೆ ನೈವೇಧ್ಯ ಸಮರ್ಪಿಸಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚುವದು ವಿಶೇಷ, ವಿವಿಧ ದೈವ ಕೋಲಗಳ ನೃತ್ಯದೊಂದಿಗೆ ಅಗ್ನಿಕೊಂಡ ಹಾಯುವದು, ಭಕ್ತರನ್ನು ಪರಾಕಾಷ್ಟೆಗೆ ಒಯ್ಯಲಿದ್ದು, ನಂಬಿಕೆಯಿಂದ ನಡೆದುಕೊಳ್ಳುವವರಿಗೆ ಶ್ರೀ ಕಾಡ್ಲಯ್ಯಪ್ಪ ಹಾಗೂ ಪರಿವಾರ ದೈವಗಳು ಬೇಡಿದ ವರ ಕರುಣಿಸಲಿದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.