ಮಡಿಕೇರಿ, ಮಾ. 19: ಕೊಡವ ಸಮುದಾಯಕ್ಕೆ ಮೊದಲ ಕೊಡವ ಸಮಾಜ ಎಂಬ ಖ್ಯಾತಿ ಮಡಿಕೇರಿ ಕೊಡವ ಸಮಾಜದ್ದು. ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯಲ್ಲಿ ಮಡಿಕೇರಿ ಕೊಡವ ಸಮಾಜವಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಈ ಸಮಾಜಕ್ಕೆ ಇದೀಗ ಹೊಸ ಸೇರ್ಪಡೆಯಾಗಿರುವದು ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಉತ್ಸಾಹಿ ಮಹಿಳೆಯರು ಈ ಒಕ್ಕೂಟ ಪ್ರಾರಂಭಿಸಿದ್ದು, ಕೇವಲ ಎರಡು ತಿಂಗಳು ಕಳೆದಿದೆ. ಒಕ್ಕೂಟದ ಪ್ರಥಮ ಕಾರ್ಯಕ್ರಮವಾಗಿ ವಿಶ್ವ ಮಹಿಳಾ ದಿನಾಚರಣೆಯ (ಮೊದಲ ಪುಟದಿಂದ) ಹಿನ್ನೆಲೆಯಾಗಿ ಇಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ಅಂತರರಾಷ್ಟ್ರೀಯ ‘ಪೊಮ್ಮಕ್ಕಡ ನಾಳ್’ ಎಂಬ ಕಾರ್ಯಕ್ರಮ ಜರುಗಿತು. ಕೊಡವ ಸಮುದಾಯ, ಕೊಡಗು ಜಿಲ್ಲೆಯ ಸ್ಥಿತಿಗತಿ. ಈಗಿನ ಅನಿವಾರ್ಯತೆ ಯಂತಹ ಗಂಭೀರ ವಿಚಾರಗಳ ಪ್ರಸ್ತಾಪದೊಂದಿಗೆ ಮಹಿಳೆಯರು ಒತ್ತಡ ಮರೆತು ಸಂಭ್ರಮಿಸಿದ್ದು, ‘ಪೊಮ್ಮಕ್ಕಡ ನಾಳ್’ ನ ವಿಶೇಷವಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಮಡಿಕೇರಿಯಲ್ಲಿ ಈ ಒಕ್ಕೂಟ ಪ್ರಾರಂಭಿಸಿರುವದು ಸ್ವಾಗತಾರ್ಹವಾಗಿದೆ. ಕೊಡಗು ಜಿಲ್ಲೆ ಪ್ರಸ್ತುತ ಈ ಹಿಂದಿನಂತೆ ಉಳಿದಿಲ್ಲ. ಈ ನಿಟ್ಟಿನಲ್ಲಿ ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಲು ಇಂತಹ ಸಂಘಟನೆಗಳ ಅಗತ್ಯವಿದೆ. ವೈಯಕ್ತಿಕ ವಿಚಾರಗಳನ್ನು ಮುಂದಿಡದೆ, ಪರಸ್ಪರ ಒಗ್ಗಟ್ಟು - ಪ್ರೀತಿ - ವಿಶ್ವಾಸದೊಂದಿಗೆ ಒಕ್ಕೂಟ ಮುನ್ನಡೆಯಲಿ ಎಂದು ಸಲಹೆಯಿತ್ತರು. ಯಾವದೇ ಕಾರಣಕ್ಕೂ ಸಂಘಟನೆಯಲ್ಲಿ ರಾಜಕೀಯ ನುಸುಳಬಾರದು. ಸ್ವಂತಿಕೆಯೊಂದಿಗೆ ಸಂಘಟನೆ ಮುಂದುವರಿಯಬೇಕೆಂದು ಕಿವಿ ಮಾತು ಹೇಳಿದ ವೀಣಾ ಅಚ್ಚಯ್ಯ, ಅಗತ್ಯ ಸೌಲಭ್ಯ, ಬೇಡಿಕೆಗಳಿದ್ದಲ್ಲಿ ಸರಕಾರದೊಂದಿಗೆ ವ್ಯವಹರಿಸಲು ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಭರವಸೆಯಿತ್ತರು. ಯಾರೇ ಇರಲಿ ತಮ್ಮತನ ಕಾಯ್ದುಕೊಂಡರೆ ಜನಾಂಗದವರಿಗೆ ಇರುವ ಗೌರವ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು, ಮಹಿಳೆಯರು ಪುರುಷರಿಗಿಂತ ಬುದ್ಧಿವಂತಿಕೆ ಹೊಂದಿದ್ದಾರೆ, ಒಕ್ಕೂಟ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಕೊಡವ ಜನಾಂಗಕ್ಕೆ, ಕೊಡಗಿಗೆ ಹಲವಾರು ರಾಜಕಾರಣಿಗಳು ಕೊಡುಗೆ ನೀಡಿದ್ದಾರೆ. ಒಕ್ಕೂಟಕ್ಕೆ ಕೊಡವ ಸಮಾಜದಿಂದಲೂ ಅಗತ್ಯ ಸಹಕಾರ ನೀಡುವದಾಗಿ ಹೇಳಿದರು.

ಮತ್ತೋರ್ವ ಅತಿಥಿಯಾಗಿದ್ದ ಇಗ್ಗುತಪ್ಪ ಕೊಡವಕೇರಿಯ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರು ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹೊಂದಿರುವ ಮಹಿಳೆಯರು ಆತ್ಮವಿಶ್ವಾಸದೊಂದಿಗೆ ಒಳ್ಳೆಯತನ ಮೈಗೂಡಿಸಿಕೊಂಡು ಅಚ್ಚುಕಟ್ಟಾದ ಜೀವನ ನಡೆಸುವಂತೆ ಕರೆ ನೀಡಿದರು.

ಇನ್ನೋರ್ವ ಅತಿಥಿ ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಅವರು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು, ಹೋಂ ಸ್ಟೇ, ರೆಸಾರ್ಟ್ ಸಂಸ್ಕøತಿ ಜಿಲ್ಲೆಗೆ ಸೂಕ್ತವಲ್ಲ. ಇದರ ಬದಲಾಗಿ ಕೊಡಗಿನ ನೈಜತೆ, ಹಸಿರು ಪರಿಸರ ಉಳಿಸಲು ಮಹಿಳೆಯರು ಚಳುವಳಿ ರೂಪದಲ್ಲಿ ಮುಂದಡಿಯಿಡಬೇಕು ಎಲ್ಲೇ ಹೋದರೂ ತಾಯಿನಾಡಿಗೆ ಮರಳಬೇಕೆಂದು ಅಭಿಪ್ರಾಯಪಟ್ಟರು.

ಕಾವೇರಿ ಕೊಡವಕೇರಿಯ ಅಧ್ಯಕ್ಷೆ ಪಳಂಗಂಡ ಕಮಲ ಸುಬ್ಬಯ್ಯ ಅನಿಸಿಕೆ ವ್ಯಕ್ತಪಡಿಸಿ ಒಕ್ಕೂಟ ನಿರ್ದಿಷ್ಟ ಗುರಿಯೊಂದಿಗೆ ಕೊಡವತನ ಉಳಿಸಿ ಕೊಳ್ಳುವಂತಹ ಕೆಲಸ ನಿರ್ವಹಿಸಲು ಸಲಹೆ ನೀಡಿದರು. ಕೊಡವಾಮೆನ ಬೊಳತ್‍ವಲ್ಲಿ ಪೊಮ್ಮಕ್ಕಡ ಪಾತ್ರ ವಿಷಯದ ಕುರಿತು ವಿಚಾರ ಮಂಡನೆ ಮಾಡಿದ ನಗರದ ಜೂನಿಯರ್ ಕಾಲೇಜಿನ ಶಿಕ್ಷಕಿ ಚೋಕೀರ ಅನಿತಾ ದೇವಯ್ಯ ಅವರು ಜನಾಂಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ತೋರಿದ್ದಾರೆ. ಕೊಡವ ಮಹಿಳೆಯರಿಗೆ ಅವರ ಆಚಾರ-ವಿಚಾರ, ಸಂಸ್ಕøತಿ ಸಿಗುತ್ತಿರುವ ಗೌರವ, ಉಡುಗೆ- ತೊಡುಗೆ, ಅಡುಗೆ ಈ ರೀತಿ ಎಲ್ಲವೂ ವಿಶಿಷ್ಟವಾದದ್ದು. ಇತರರು ಈ ಬಗ್ಗೆ ಅಭಿಮಾನ ತೋರುವದು ಇದಕ್ಕೆ ಇರುವ ಗೌರವದ ಪ್ರತೀಕವಾಗಿದ್ದು, ಜನಾಂಗದ ಮಹಿಳೆಯರೂ ಇದನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರು ಒಕ್ಕೂಟ ಸ್ಥಾಪಿಸಿದ ಉದ್ದೇಶ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದರು. ಫೀ.ಮಾ. ಕಾರ್ಯಪ್ಪ ಕಾಲೇಜು ತಂಡದಿಂದ ಆಕರ್ಷಕ ನೃತ್ಯ, ಒಕ್ಕೂಟದ ಸದಸ್ಯರಿಂದ ನೃತ್ಯ, ಕೂಪದಿರ ಸುಂದರಿ ಮಾಚಯ್ಯ ಅವರಿಂದ ಕವನ ವಾಚನ, ಆಲೆಮಾಡ ಚಿತ್ರಾ ನಂಜಪ್ಪ, ಚೊಟ್ಟೆಯಂಡಮಾಡ ಬೇಬಿ ಪೂವಯ್ಯ, ಕನ್ನಂಡ ಸುನಿತಾ ಸಂಪತ್, ಮೂಡೇರ ಧರಣಿ ಅವರ ಹಾಡುಗಾರಿಕೆ, ವಿವಿಧ ಸ್ಪರ್ಧಾ ಕಾರ್ಯಕ್ರಮದೊಂದಿಗೆ ಮಹಿಳೆಯರು ಸಂಭ್ರಮಿಸಿದರು.

ಜನರಲ್ ತಿಮ್ಮಯ್ಯ ಶಾಲೆಯ ಕಾರ್ಯಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಪ್ರಾಂಶುಪಾಲೆ ಕಲ್ಮಾಂಡಂಡ ಸರಸ್ವತಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಎನ್‍ಸಿಸಿ ಸಾಧಕಿ ಅಜ್ಜಿನಂಡ ಐಶ್ವರ್ಯ ದೇಚಮ್ಮ ಅವರನ್ನು ಸನ್ಮಾನಿಸಲಾಯಿತು. ಅಂತರರಾಷ್ಟ್ರೀಯ ಹಾಕಿ ಆಟಗಾರ್ತಿಯರಾದ ಮಲ್ಲಮಾಡ ಪೊನ್ನಮ್ಮ ಹಾಗೂ ಮಲ್ಲಮಾಡ ಲೀಲಾವತಿ ಅವರ ಪರವಾಗಿ ಅವರ ಪೋಷಕರನ್ನು ಗೌರವಿಸಲಾಯಿತು.

ಮಾದೇಟಿರ ಪ್ರಮೀಳಾ ಜೀವನ್ ಪ್ರಾರ್ಥಿಸಿ, ಉಳ್ಳಿಯಡ ಸಚಿತಾ ನಂಜಪ್ಪ ಸ್ವಾಗತಿಸಿದರು. ಬೊಳ್ಳಜೀರ ಯಮುನಾ ಅಯ್ಯಪ್ಪ ಒಕ್ಕೂಟದ ವರದಿ ನೀಡಿದರು. ಬಾಳೆಯಡ ಸವಿತಾ ಕಿಶನ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿ, ಬಾಳೆಯಡ ದಿವ್ಯಾನಂಜಪ್ಪ ವಂದಿಸಿದರು. ಪಳಂಗಂಡ ರೇಖಾ, ಕೂಪದೀರ ಜೂನಾ ವಿಜಯ್, ಕೋಟೇರ ಮೀರಾ ಸನ್ಮಾನಿತರನ್ನು ಪರಿಚಯಿಸಿದರು. ಪಾಲೆಯಂಡ ರೂಪಾ ಸುಬ್ಬಯ್ಯ, ಚೇನಂಡ ಜಾನ್ಸಿ, ಪೊನ್ನಚೆಟ್ಟೀರ ಡಾಟಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.