ಚೆಟ್ಟಳ್ಳಿ, ಮಾ. 19: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ಮಿಸಿದ ನರೇಂದ್ರ ಮೋದಿ ಸಹಕಾರ ಭವನದ ಮೇಲಂತಸ್ಥಿನಲ್ಲಿ ನಿರ್ಮಿತವಾದ ಅನ್ನದಾತ ಸಭಾಂಗಣ ಯುಗಾದಿ ದಿನವಾದ ತಾ. 29 ರಂದು ಉದ್ಘಾಟನೆಗೊಳ್ಳಲಿದೆ.

ಸುಮಾರು 50 ವರ್ಷಗಳ ಹಿಂದೆ ಕೆಲವೇ ಕೆಲವು ರೈತರು ಸೇರಿ ಚೆಟ್ಟಳ್ಳಿಯಲ್ಲೊಂದು ಸಹಕಾರ ಸಂಘವನ್ನು ಸ್ಥಾಪಿಸಿ, ಸ್ಥಳಿಯರ ಸಹಕಾರದೊಂದಿಗೆ 1976 ರಿಂದ ಸಂಘ ಬ್ಯಾಂಕ್ ವ್ಯವಹಾರವನ್ನು ಪ್ರಾರಂಭಿಸಿತು. ಆಗಿನಿಂದ ಆಡಳಿತ ಮಂಡಳಿಯ, ಸಿಬ್ಬಂದಿಗಳ ಶ್ರಮದ ಫಲವಾಗಿ ಹಾಗೂ ಸದಸ್ಯರ ಸಹಕಾರದಿಂದ ಸಂಘ ವರ್ಷದಿಂದ ವರ್ಷಕ್ಕೆ ಏಳಿಗೆಯನ್ನು ಕಾಣುತ್ತಾ ಲಾಭದ ಹಾದಿಯಲ್ಲೇ ನಡೆಯುತ್ತಿದೆ.

ಪ್ರಸ್ತುತ 1021 ಸದಸ್ಯರಿರುವ ಈ ಸಂಘದಲ್ಲಿ ಸದಸ್ಯರಿಗೆ ಕೆ.ಸಿ.ಸಿ. ಸಾಲ, ಸದಸ್ಯರು ಮತ್ತು ಸದಸ್ಯರೇತರರಿಗೆ ವಾಹನ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ಅಡವು ಸಾಲ, ಆಸಾಮಿ ಸಾಲ, ಸ್ವಸಹಾಯ ಸಂಘಗಳ ಸಾಲ, ಜಾಮೀನು ಸಾಲ, ವಿದ್ಯಾಭ್ಯಾಸ ಸಾಲ ಚಿನ್ನಾಭರಣ ಸಾಲ, ನೀಡಲಾಗುತಿದ್ದು, ರಸಗೊಬ್ಬರಗಳು, ಕೃಷಿ ಉಪಕರಣಗಳು, ಸಿಮೆಂಟ್, ಹತ್ಯಾರುಗಳನ್ನು ಮಾರಾಟ ಮಾಡಲಾಗುವದು ಮತ್ತು ಸದಸ್ಯರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಜೆರಾಕ್ಸ್ ಯಂತ್ರವನ್ನು ಇಡಲಾಗಿದೆ. ಸಂಘ ಭದ್ರತಾ ಕೊಠಡಿ ಹೊಂದಿದ್ದು, ಸದಸ್ಯರುಗಳಿಗೆ ಲಾಕರ್ ಸೌಲಭ್ಯವನ್ನು ಒದಗಿಸಿದೆ. ಸಂಘದ ವತಿಯಿಂದ 559 ಸದಸ್ಯರನ್ನು ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯ ಫಲಾನುಭವಿಗಳಾಗಿ ನೋಂದಾಯಿ ಸಲಾಗಿದೆ. 2015-16ನೇ ಸಾಲಿಗೆ ಸಂಘದ ಉತ್ತಮ ಕಾರ್ಯ ನಿರ್ವಹಣೆಗಾಗಿ ಸಂಘಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 2015-16ನೇ ಸಾಲಿಗೆ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿದರ ಬಗ್ಗೆ ಪ್ರಶಸ್ತಿ ಹಾಗೂ ರೂ. 10,000.00ಗಳ ಬಹುಮಾನ ಬಂದಿರುತ್ತದೆ. ಹಿಂದೆ ನಷ್ಟದಲ್ಲಿದ್ದ ಸಂಘವನ್ನು ಲಾಭದೆಡೆಗೆ ಕೊಂಡೊಯ್ದಿದ್ದು ಪ್ರಸ್ತುತ ರೂ. 16.21 ಲಕ್ಷ ಲಾಭಗಳಿಕೆಯೊಂದಿಗೆ ನಡೆಯುತ್ತಿದ್ದು, ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಎಸ್. ತಿಮ್ಮಪ್ಪಯ್ಯ ಶ್ರಮಿಸುತ್ತಿದ್ದಾರೆ.

ಪ್ರಸ್ತುತ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದು, ರೈತರು ಹಾಗೂ ಸ್ಥಳಿಯರಿಗೆ ಸಭೆ-ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ನೂತನ ಬೃಹತ್ ಕಟ್ಟಡವನ್ನು ನಿರ್ಮಿಸಿ ಅದಕ್ಕೆ ದೇಶದ ಪ್ರಧಾನಿಯವರ ಹೆಸರನ್ನು ಇಡುವದರ ಮೂಲಕ ನರೇಂದ್ರ ಮೋದಿ ಭವನವನ್ನು ನಿರ್ಮಿಸಿ ಕೆಳ ಅಂತಸ್ತಿನಲ್ಲಿ ಗೋದಾಮು, ಮುಂದೆ ಅಂಗಡಿ ಮಳಿಗೆಯನ್ನು ನಿರ್ಮಿಸಲಾಗಿ ಮೋದಿ ಭವನದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಮೋದಿ ಭವನದ ಮೇಲ್ಭಾಗದಲ್ಲಿ ಸಭೆ, ಸಮಾರಂಭ ನಡೆಸಲು ವೇದಿಕೆ ಹಾಗೂ ವಿಶಾಲವಾದ ಸಭಾಂಗಣ ಅವಶ್ಯವಿದ್ದುದರಿಂದ ಸಂಘದ ಮಹಾಸಭೆಯಲ್ಲಿ ಅನುಮೋದನೆ ಪಡೆದು ಸಂಘದ ಕಮಿಟಿ ಸಭೆಯಲ್ಲಿ ಸಭಾಂಗಣದ ರೂಪುರೇಖೆಯನ್ನು ತಯಾರಿಸಲಾಗಿ ಅದಕ್ಕೆ ಅನ್ನದಾತ (ರೈತ) ಸಭಾಂಗಣವೆಂದು ಹೆಸರಿಡಲಾಗಿದೆ.

ಮೋದಿ ಭವನ ನಿರ್ಮಾಣದಿಂದ ಹಿಡಿದು ಮೇಲಂತಸ್ಥಿನ ಅನ್ನದಾತ ಸಂಭಾಂಗಣದವರೆಗೆ ಸುಮಾರು ರೂ. 1 ಕೋಟಿ 20 ಲಕ್ಷ ವೆಚ್ಚವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಯಾವದೇ ರೀತಿಯ ಸಾಲ ಪಡೆಯದೇ ಸಂಘದ ಸ್ವಂತ ಬಂಡವಾಳದಿಂದಲೇ ಕಟ್ಟಡ ನಿರ್ಮಾಣವನ್ನು ಮಾಡಲಾಗಿದ್ದು, ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ, ಅಪೆಕ್ಸ್ ಬ್ಯಾಂಕ್ ಹಾಗೂ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‍ನಿಂದ ಧನ ಸಹಾಯ ಬಂದಿರುವದರ ಜೊತೆಗೆ ಸಂಘದ ಸದಸ್ಯರು ಕೂಡ ಕಟ್ಟಡ ನಿರ್ಮಾಣಕ್ಕೆ ಸ್ವತಃ ದೇಣಿಗೆ ನೀಡುತಿದ್ದಾರೆ.

- ಕರುಣ್ ಕಾಳಯ್ಯ