ಮಡಿಕೇರಿ, ಮಾ. 19: ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರಿ ನೌಕರರಲ್ಲಿ, ಹಣ ಅಥವಾ ಕರ್ತವ್ಯ ದುರುಪಯೋಗದ ಆರೋಪ ಎದುರಿಸುವವರ ಸಂಖ್ಯೆ 259 ಮಂದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, ಕಳೆದ 5 ವರ್ಷಗಳಲ್ಲಿ ಕೊಡಗಿನ ಇಬ್ಬರು ಅಧಿಕಾರಿಗಳು ಮತ್ತು 47 ಸಿಬ್ಬಂದಿ ಲೋಕಾಯುಕ್ತ ಧಾಳಿಯಿಂದ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ರಾಜ್ಯ ಸರಕಾರದಿಂದ ಎ.ಸಿ.ಬಿ. ರಚನೆಗೊಂಡ ಬಳಿಕ ಇದುವರೆಗೆ ಯಾವದೇ ಧಾಳಿಗಳು ನಡೆದಿಲ್ಲವೆಂದು ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಲ್ವರು ಉದ್ಯೋಗಿಗಳು ದುರುಪಯೋಗ ಸಂಬಂಧ ವಿಚಾರಣೆ ಎದುರಿಸುತ್ತಿ ರುವದಾಗಿ ಶಾಸಕರು ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಾರಿಗೆ ಸಚಿವರ ಉತ್ತರ

ರಾಜ್ಯ ಸಾರಿಗೆ ಸಂಬಂಧ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಬೇರೊಂದು ಪ್ರಶ್ನೆಗೆ ಉತ್ತರಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಜಿಲ್ಲೆಯಲ್ಲಿ 113 ಬಸ್‍ಗಳು ಇದ್ದು, ಈ ಪೈಕಿ 47 ಬಸ್‍ಗಳು 7 ಲಕ್ಷ ಕಿ.ಮೀ. ಮೀರಿ ಸಂಚರಿಸಿದ್ದಾಗಿವೆ ಎಂದು ತಿಳಿಸಿದ್ದಾರೆ.

ಅಲ್ಲದೆ ಪ್ರಯಾಣಿಕರ ತುರ್ತು ಸೇವೆಗೆ ಔಷಧಿ ಪೆಟ್ಟಿಗೆ ಸಹಿತ, ನಿರುಪಯುಕ್ತ ಬಸ್‍ಗಳನ್ನು ನಿಗಮದ ನಿಯಮ ಪ್ರಕಾರ ವಿಲೇವಾರಿ ಮಾಡಲಾಗುವದು ಎಂದು ಸಚಿವರು ಸದಸ್ಯರ ಪ್ರಶ್ನೆಗೆ ಉತ್ತರಿಸಿದ್ದಾರೆ.