ಕುಶಾಲನಗರ, ಮಾ. 19: ಕಾವೇರಿ ತಾಲೂಕು ರಚಿಸುವಂತೆ ಆಗ್ರಹಿಸಿ ಭಾನುವಾರ ಹಮ್ಮಿಕೊಂಡಿದ್ದ ಕುಶಾಲನಗರ ಬಂದ್ ಬಹುತೇಕ ಯಶಸ್ವಿಯಾಗಿದೆ. ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ನಂತರ ಹೋರಾಟಗಾರರು ರಸ್ತೆ ತಡೆ ನಡೆಸಿ ಬಂದ್‍ಗೆ ಬಲ ತುಂಬಿದರು. ಕಾವೇರಿ ತಾಲೂಕು ಹೋರಾಟ ಸಮಿತಿ, ಕುಶಾಲನಗರ ಪಟ್ಟಣ ಪಂಚಾಯ್ತಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಂದ್‍ಗೆ ಪಟ್ಟಣದ ವರ್ತಕರು ಹಾಗೂ ವಾಹನ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗಡಿಭಾಗ ಕೊಪ್ಪ ಗೇಟ್,

(ಮೊದಲ ಪುಟದಿಂದ) ಮಡಿಕೇರಿ ರಸ್ತೆಯ ಬೈಚನಹಳ್ಳಿಯ ಬ್ಲೂಮೂನ್ ಪೆಟ್ರೋಲ್ ಬಂಕ್, ಹಾಸನ ರಸ್ತೆಯ ಬಸವೇಶ್ವರ ದೇವಾಲಯದವರೆಗೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಕುಶಾಲನಗರದಲ್ಲಿ ಬೆರಳೆಣಿಕೆಯ ಟ್ಯಾಕ್ಸಿಗಳು, ಆಟೋಗಳ ಸಂಚಾರ ಹೊರತುಪಡಿಸಿ ಸಾರಿಗೆ ಸಂಚಾರ ಎಂದಿನಂತೆ ಮುಂದುವರೆದಿತ್ತು. ಖಾಸಗಿ ವಾಹನಗಳ ಓಡಾಟ ಎಂದಿನಂತೆ ಕಂಡುಬಂದರೂ ಬಂದ್ ಹಿನ್ನಲೆಯಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ಜನರ ಓಡಾಟ ವಿರಳವಾಗಿತ್ತು.

ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್‍ಗೆ ಕರೆ ನೀಡಲಾಗಿದ್ದು ಮಧ್ಯಾಹ್ನ 11 ರಿಂದ 12 ಗಂಟೆವರೆಗೆ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಹೋರಾಟಗಾರರು ಮಾನವ ಸರಪಳಿ ರಚಿಸಿ 1 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ತಾಲೂಕು ಹೋರಾಟ ಸಮಿತಿ ಪ್ರಮುಖರು, ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಪದಾಧಿಕಾರಿಗಳು, ವಿವಿಧ ಪಕ್ಷಗಳು ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ರಸ್ತೆ ತಡೆಯಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ ಗೀತೆಗಳನ್ನು ಹಾಡುವ ಮೂಲಕವೂ ಪ್ರತಿಭಟನೆ ಮುಂದುವರೆಯಿತು. ಮಡಿಕೇರಿ ಹಾಗೂ ಮೈಸೂರಿನತ್ತ ತೆರಳುವ ವಾಹನಗಳ ಮಾರ್ಗವನ್ನು ಬದಲಿಸಿ ಪರ್ಯಾಯ ರಸ್ತೆಯ ಮೂಲಕÀ ಸಂಚಾರಕ್ಕೆ ಕುಶಾಲನಗರ ಪೊಲೀಸ್ ಸಿಬ್ಬಂದಿಗಳು ವ್ಯವಸ್ಥೆ ಕಲ್ಪಿಸಿದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್, ಯಾವದೇ ಒತ್ತಾಯವಿಲ್ಲದೆ ಕುಶಾಲನಗರದ ವರ್ತಕರು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ವಾಹನ ಚಾಲಕರೂ ಕೂಡ ಸ್ವಯಂಪ್ರೇರಿತವಾಗಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇವಲ 1 ಗಂಟೆಗಳ ಕಾಲ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಂಗಳವಾರ ರಾಜ್ಯದ ಮುಖ್ಯಮಂತ್ರಿಗಳನ್ನು ನಿಯೋಗ ಭೇಟಿ ಮಾಡಿ ಅಹವಾಲು ಸಲ್ಲಿಸಲಿದೆ. ಪ್ರತ್ಯೇಕ ತಾಲೂಕಿಗೆ ಬೇಕಾದ ಎಲ್ಲಾ ಅಂಶಗಳು ಒಳಗೊಂಡಿರುವ ಕುಶಾಲನಗರ ಪಟ್ಟಣ ನೂತನ ತಾಲೂಕು ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರÀು.

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಕುಶಾಲನಗರ ಪ್ರತ್ಯೇಕ ತಾಲೂಕಾಗಿ ರಚನೆಯಾಗಲೇಬೇಕು ಎಂಬ ಸದುದ್ದೇಶದಿಂದ ಪಕ್ಷಾತೀತವಾಗಿ ನಡೆಸಿದ ಬಂದ್ ಯಶಸ್ವಿಯಾಗಿದೆ. ಈ ಭಾಗದ ಜನತೆಯ ಆಗ್ರಹವನ್ನು ಸರಕಾರಕ್ಕೆ ಮುಟ್ಟಿಸುವ ಪ್ರಯತ್ನ ಇದಾಗಿದೆ. ಈಗಿನ 49 ನೂತನ ತಾಲೂಕುಗಳೊಂದಿಗೆ ಕುಶಾಲನಗರಕ್ಕೂ ಸ್ಥಾನ ಕಲ್ಪಿಸ ಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಲವು ಕನ್ನಡಪರ ಸಂಘಟನೆಗಳ ಪ್ರಮುಖರು, ಪಂಚಾಯ್ತಿಯ ಮಹಿಳಾ ಸದಸ್ಯರುಗಳ ಗೈರು ಹಾಜರಿ ವಿಶೇಷವಾಗಿ ಕಂಡುಬಂತು. ಪೊಲೀಸ್ ಉಪ ಅಧೀಕ್ಷಕ ಸಂಪತ್‍ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ರಸ್ತೆ ತಡೆ ಸಂದರ್ಭ ವಿವಿಧ ಪಕ್ಷಗಳ ಹಾಗೂ ಸಂಘಸಂಸ್ಥೆಗಳ ಪ್ರಮುಖರು ಇದ್ದರು.