ವೀರಾಜಪೇಟೆ, ಮಾ. 16: ಇಲ್ಲಿನ ಒಂಟಿಯಂಗಡಿ ಬಳಿಯ ಕಣ್ಣಂಗಾಲದಲ್ಲಿ ಕೇರಳದಿಂದ ಬಂದಿದ್ದ ಕಾರ್ಮಿಕನೊಬ್ಬ ವಿದ್ಯುತ್ ತಗಲಿ ಸಾವನ್ನಪ್ಪಿರುವದಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನ ವಿಳಾಸ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಕೇರಳದಿಂದ ಉದ್ಯೋಗ ಹುಡುಕಿಕೊಂಡು ವೀರಾಜಪೇಟೆಗೆ ಬಂದಿದ್ದ ಸುಮಾರು 50ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಮಂಗಳವಾರ ಕಣ್ಣಂಗಾಲದ ಬಿದ್ದಪ್ಪ ಎಂಬವರ ಕಾಫಿ ತೋಟದಲ್ಲಿ ಕರಿ ಮೆಣಸು ಕೊಯ್ಲು ಮಾಡುತ್ತಿದ್ದ. ನಿನ್ನೆ ಸಂಜೆ ಕಬ್ಬಿಣದ ಏಣಿ ತೆಗೆದುಕೊಂಡು ಇನ್ನೊಂದು ಮರ ಹತ್ತಲು ಏಣಿ ಸಾಗಿಸುತ್ತಿದ್ದಾಗ ತೋಟದಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿಗೆ ತಗಲಿ ವಿದ್ಯುತ್ ಸ್ಪರ್ಶಗೊಂಡು ಆತನ ದೇಹ ಸುಟ್ಟು ಕರಕಲಾಗಿ ಬಿದ್ದಿತ್ತು. ಇದನ್ನು ತಡವಾಗಿ ನೋಡಿದ ತೋಟದ ಮಾಲೀಕರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದರು.

ತೋಟದ ಮಾಲೀಕರು ಕೆಲಸಕ್ಕೆ ಸೇರುವ ಮೊದಲು ಈತನ ಹೆಸರನ್ನು ವಿಚಾರಿಸಿದಾಗ ಕೇರಳದ ಕುಮಾರ್ ಎಂದು ತಿಳಿಸಿದನೆಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯಿಂದ ಕುಮಾರ್ ಕೇರಳದ ಇರಿಟ್ಟಿಯವನೆಂದು ಹೇಳಲಾಗಿದ್ದು ಈ ಸಂಬಂಧ ಇಲ್ಲಿನ ಪೊಲೀಸರು ಇರಿಟ್ಟಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಆತನ ನಿಖರವಾದ ವಿಳಾಸ ಇನ್ನೂ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.