ಮಡಿಕೇರಿ, ಮಾ. 16: ಬೆಂಗಳೂರು ಆನೇಕಲ್‍ನ ಪುರಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹತ್ಯೆ ಪ್ರಕರಣವನ್ನು ಖಂಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಅವರು ಶ್ರೀನಿವಾಸ್ ಪ್ರಸಾದ್ ಹತ್ಯೆಯನ್ನು ಖಂಡಿಸಿ ಇಂದು ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪ್ರವೀಣ್ ಪೂಜಾರಿ ಸೇರಿದಂತೆ ಹಿಂದೂ ಸಂಘಟನೆ ಹಲವಾರು ಮುಖಂಡರನ್ನು ಹತ್ಯೆ ಮಾಡಲಾಗಿದೆ. ಇದಕ್ಕೆ ಸರಕಾರದ ಆಡಳಿತ ವೈಫಲ್ಯವೇ ಕಾರಣವಾಗಿದೆ. ಕಾಂಗ್ರೆಸ್ ಸರಕಾರಕ್ಕೆ ಸಮರ್ಪಕ ಆಡಳಿತ ನೀಡಲು, ಇಂತಹ ಪ್ರಕರಣಗಳನ್ನು ಹತ್ತಿಕ್ಕಲು ಸಾಧ್ಯವಾಗದಿದ್ದಲ್ಲಿ ಅಧಿಕಾರ ಬಿಟ್ಟು ತೆರಳುವಂತೆ ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಜಿ.ಎಲ್. ನಾಗರಾಜ್, ರವಿಕುಶಾಲಪ್ಪ, ರವಿಕಾಳಪ್ಪ, ರಾಬಿನ್ ದೇವಯ್ಯ, ಯಮುನಾ ಚಂಗಪ್ಪ, ಕಾಂತಿ ಸತೀಶ್, ಎಸ್.ಎನ್. ರಾಜಾರಾವ್, ತಳೂರು ಕಿಶೋರ್ ಕುಮಾರ್, ಎಂ.ಬಿ. ದೇವಯ್ಯ, ನಳಿನಿ, ಸುಮಾ ಸುದೀಪ್, ಬಿ. ಶಿವಪ್ಪ, ಮಹೇಶ್ ಜೈನಿ, ಕೊಮಾರಪ್ಪ, ಶಜೀಲ್ ಕೃಷ್ಣನ್ ಮತ್ತಿತರರು ಪಾಲ್ಗೊಂಡಿದ್ದರು.