ಸೋಮವಾರಪೇಟೆ, ಮಾ. 11: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಟ್ಟ ವಿವಿಧ ಮಳಿಗೆಗಳ ಹರಾಜಿನಿಂದ ಪ್ರಸಕ್ತ ವರ್ಷದಲ್ಲಿ ಪಟ್ಟಣ ಪಂಚಾಯಿತಿಗೆ ರೂ. 1,34,500 ಹೆಚ್ಚುವರಿ ಆದಾಯ ಲಭಿಸಿದೆ. ಕಳೆದ ವರ್ಷ ವಿವಿಧ ಮಾರುಕಟ್ಟೆಗಳು 21,38,000 ರೂಪಾಯಿಗಳಿಗೆ ಹರಾಜಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 22,72,500 ರೂ.ಗಳಿಗೆ ಹರಾಜಾಗುವ ಮೂಲಕ ರೂ. 1.34 ಲಕ್ಷ ಹೆಚ್ಚುವರಿ ಆದಾಯ ಬಂದಿದೆ.

ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆಯಲ್ಲಿ ನಿಗದಿಗಿಂತ ಕಡಿಮೆ ದರ ನಮೂದು ಮಾಡಿದ್ದರಿಂದ ಹಂದಿ ಮಾಂಸ ಮಾರುಕಟ್ಟೆ ಮತ್ತು ಹಸಿ ಮೀನಿನ 11ನೇ ಮಳಿಗೆಯನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು.

ಉಳಿದಂತೆ ಸಂತೆ ಸುಂಕ ಎತ್ತಾವಳಿಯಲ್ಲಿ ಕಳೆದ ವರ್ಷ 8,50,000 ರೂ. ಗೆ ಹರಾಜಾಗಿದ್ದರೆ, ಈ ವರ್ಷ 8,62,000 ರೂ.ಗಳಿಗೆ ಹರಾಜಾಗುವ ಮೂಲಕ ರೂ. 12 ಸಾವಿರ ಅಧಿಕ ವರಮಾನ ಬಂದಿದೆ. ಕುರಿ ಮಾಂಸ ಮಾರುಕಟ್ಟೆಯ 3 ಮಳಿಗೆಗಳ ಹರಾಜಿನಿಂದ ರೂ. 1,71,000 ಆದಾಯ ಲಭಿಸಿದೆ. ಬಸ್ ನಿಲ್ದಾಣದ ಶುಲ್ಕ ಗುತ್ತಿಗೆಯಲ್ಲಿ ಕಳೆದ ವರ್ಷ ರೂ. 30,000 ಬಂದಿದ್ದರೆ, ಪ್ರಸಕ್ತ ವರ್ಷ ರೂ. 33,500 ಕ್ಕೆ ಹರಾಜಾಗಿದೆ.

ಕೋಳಿ ಮಾಂಸದ 3 ಮಳಿಗೆಗಳು ಕಳೆದ ವರ್ಷ ರೂ. 6,37,000ಗೆ ಹರಾಜಾಗಿದ್ದರೆ ಈ ವರ್ಷ 6,47,000 ರೂಪಾಯಿಗಳಿಗೆ ಹರಾಜಾಗುವ ಮೂಲಕ ರೂ. 10 ಸಾವಿರ ಅಧಿಕ ಆದಾಯ ಲಭಿಸಿದೆ. ಹಸಿ ಮೀನು ಮಾರುಕಟ್ಟೆ ಹರಾಜಿನಲ್ಲಿ ಕಳೆದ ವರ್ಷ ರೂ. 4,70,000 ವರಮಾನ ಬಂದಿದ್ದರೆ, ಪ್ರಸಕ್ತ ವರ್ಷ 5,59,000 ರೂಪಾಯಿಗಳಿಗೆ ಹರಾಜಾಗುವ ಮೂಲಕ 89,000 ರೂಪಾಯಿ ಹೆಚ್ಚು ಆದಾಯ ಬಂದಿದೆ.

ಹಂದಿ ಮಾಂಸ ಮಾರುಕಟ್ಟೆ ಕಳೆದ ವರ್ಷ 3,60,000ಕ್ಕೆ ಹರಾಜಾಗಿದ್ದರೆ ಈ ವರ್ಷ ಕೇವಲ ರೂ. 1,96,000 ಮಾತ್ರ ಬಿಡ್ ದರ ಬಂದಿದೆ. ಹಸಿಮೀನು ಮಾರುಕಟ್ಟೆಯ 11ನೇ ಮಳಿಗೆ ಕಳೆದ ವರ್ಷ ರೂ. 1,80,000ಗೆ ಹರಾಜಾಗಿದ್ದರೆ ಈ ವರ್ಷ ರೂ. 1,36,000 ದರ ನಮೂದಾಗಿದೆ. ಈ ಹಿನ್ನೆಲೆ ಈ ಎರಡೂ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಆಡಳಿತ ಮಂಡಳಿ ಸಭೆಯ ತೀರ್ಮಾನಕ್ಕೆ ಕಾಯ್ದಿರಿಸಿದೆ.

ಒಟ್ಟಾರೆ ಕಳೆದ ವರ್ಷಕ್ಕಿಂತ ಈ ವರ್ಷ 1,34,500 ರೂಪಾಯಿಗಳು ಅಧಿಕ ವರಮಾನ ಪಂಚಾಯಿತಿಗೆ ಲಭಿಸಿದೆ.

ಸಭೆಯಲ್ಲಿ ಉಪಾಧ್ಯಕ್ಷ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ ಸೇರಿದಂತೆ ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ, ಕಂದಾಯಾಧಿಕಾರಿ ರಾಮಚಂದ್ರ, ಆರೋಗ್ಯಾಧಿಕಾರಿ ಉದಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು.