ಸೋಮವಾರಪೇಟೆ, ಮಾ.10: ಮಲೆನಾಡು ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ನೂತನ ಸಮುದಾಯ ಭವನಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರಪ್ಪನ ಗುಡಿ ಗ್ರಾಮದಲ್ಲಿ ರೂ. 24 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದ್ದು, ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಸಮುದಾಯ ಭವನ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಕಾಮಗಾರಿ ಉದ್ದೇಶಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಗುಣಮಟ್ಟ ವನ್ನು ಕಾಯ್ದುಕೊಳ್ಳಬೇಕು ಎಂದರು.

ಈ ಸಂದರ್ಭ ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷೆ ದಾಕ್ಷಾಯಣಿ, ಸದಸ್ಯರುಗಳಾದ ಮಹೇಶ್, ರವಿಕುಮಾರ್, ಈಶ್ವರ್, ಮಂಜುಳ, ಕಿಶೋರ್ ಕುಮಾರ್, ಮಾಜಿ ಸದಸ್ಯ ಜಗದೀಶ್, ಗುತ್ತಿಗೆದಾರ ಶಶಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.