ನಾಪೋಕ್ಲು, ಮಾ. 10: ಕಕ್ಕಬೆ ಗ್ರಾಮ ಪಂಚಾಯಿತಿ ಯವಕ ಪಾಡಿ ಗ್ರಾಮದ ನಿವಾಸಿಗಳು ಇದೀಗ ಹುಲಿ, ಕಾಡಾನೆ ಹಾವಳಿಗೆ ಗುರಿ ಯಾಗುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ ತಡಿಯಂಡ ಮೊಳ್ ಬೆಟ್ಟದ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ನೂರಾರು ಏಕರೆ ಪ್ರದೇಶ ಬೆಂಕಿ ಬಿದ್ದು, ಭಸ್ಮವಾಗಿ ಹಸಿರು ನಾಶವಾಗಿರುವದರಿಂದ ಯವಕಪಾಡಿ, ಮರಂದೋಡ, ಚೇಲಾವರ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಡು ಪ್ರಾಣಿಗಳು ಲಗ್ಗೆಯಿಡುತ್ತಿರುವದರಿಂದ ರೈತರ ಬೆಳೆ ನಷ್ಟ ಸಂಭವಿಸುತ್ತಿದೆ.

ರಾತ್ರಿ ವೇಳೆ ಯವಕಪಾಡಿ ಗ್ರಾಮದ ಕುಡಿಯರ ಬೋಪಯ್ಯ ಅವರ ಮನೆಯ ಬಳಿ ಇದ್ದ ಬೈನೆ ಮರವನ್ನು ಕಾಡಾನೆ ಮುರಿದು ಬೀಳಿಸಿದರ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಇಲ್ಲಿಯ ನಿವಾಸಿಗಳಿಗೆ ಅಪಾಯದ ಜೊತೆ ವಿದ್ಯುತ್ ಇಲ್ಲದಾಗಿದೆ.

ಇದೇ ರೀತಿ ಕಳೆದ ವಾರದಲ್ಲಿಯೂ ಕಾಡಾನೆ ಬೈನೆ ಮರ ಬೀಳಿಸಿದರ ಪರಿಣಾಮ ವಿದ್ಯುತ್ ಕಂಬ ಮುರಿದು ದುರಸ್ಥಿಪಡಿಸಲಾಗಿತ್ತು. ಇದೀಗ ಪುನಃ ಮರುಕಳಿಸಿದೆ. ಕಳೆದೆರಡು ದಿನಗಳಿಂದ ಕಾಡಾನೆ ಅಲ್ಲದೆ ಹುಲಿಯು ಕಂಡು ಬಂದಿದ್ದು, ರಾತ್ರಿ ಇಲ್ಲಿಯ ನಿವಾಸಿಗಳ ನಾಯಿಗಳು ವಿಪರೀತ ಭಯಪಟ್ಟು ಮನೆಯೊಳಗೆ ಅವಿತುಕೊಂಡಿವೆ. ಈ ಬಗ್ಗೆ ಪರಿಶೀಲಿಸಿದಾಗ ಇಲ್ಲಿಯ ಮನೆಗಳ ಸಮೀಪ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ.

ಇದರಿಂದಾಗಿ ಗ್ರಾಮಸ್ಥರು ಮನೆಯಿಂದ ಹೊರ ಬರಲು ಭಯಪಡುವಂತಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.