ಮಡಿಕೇರಿ, ಮಾ. 9: ನಗರದ ಜಾಮೀಯಾ ಮಸೀದಿ ವಿಚಾರದಲ್ಲಿ ಎರಡು ಬಣಗಳ ನಡುವೆ ಈ ಹಿಂದೆಯೆ ಉದ್ಭವಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಒಂದು ಬಣ ಇಂದು ವಕ್ಫ್ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಉಚ್ಚ ನ್ಯಾಯಾಲಯ ನೀಡಿರುವ ಆದೇಶದಂತೆ ಜಾಮೀಯಾ ಮಸೀದಿಯ ಮಹಾಸಭೆ ಕರೆಯಬೇಕು. ವಕ್ಫ್ ಮಂಡಳಿಯಲ್ಲಿ ಅನುಮೋದಿ ಸಿರುವ ಜಾಮೀಯಾ ಮಸೀದಿಯ ಬೈಲಾವನ್ನು ರದ್ದುಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ವಕ್ಫ್ ಮಂಡಳಿ ಅಧಿಕಾರಿ ಶಾದತ್ ಅವರ ಮುಂದಿಟ್ಟರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಾಮೀಯಾ ಮಸೀದಿ ಅಧ್ಯಕ್ಷ ನಜೀರ್ ಕುರೈಶಿ ಅವರು ಜಾಮೀಯಾ ಮಸೀದಿ ಸಮಸ್ತ ಮುಸಲ್ಮಾನ ಬಾಂಧವರಿಗೆ ಸೇರಿದ್ದಾಗಿದೆ. ಆದರೆ ಕೆಲವರು ತಮ್ಮ ಸ್ವಂತಕ್ಕೆ ಸೇರಿದ್ದು ಎಂಬಂತೆ ವರ್ತಿಸುತ್ತಿದ್ದು, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇದು ಖಂಡನೀಯ. ಈಗಾಗಲೇ ಪ್ರಕರಣ ನ್ಯಾಯಾಲಯ ದಲ್ಲಿದ್ದು, ಮಹಾಸಭೆ ಕರೆಯುವಂತೆ ನ್ಯಾಯಾಲಯ ಆದೇಶಿಸಿದ್ದರೂ ಕೂಡ ವಕ್ಫ್ ಅಧಿಕಾರಿಗಳು ಸಭೆ ಕರೆಯುತ್ತಿಲ್ಲ. ಮುಸಲ್ಮಾನ

(ಮೊದಲ ಪುಟದಿಂದ) ಸಮುದಾಯ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಮಾತ್ರವಲ್ಲದೆ ಜಾಮೀಯಾ ಮಸೀದಿ ಆಸ್ತಿಯನ್ನು ವ್ಯಕ್ತಿಯೊಬ್ಬರು ತಮ್ಮ ಖಾತೆಗೆ ಬದಲಾಯಿಸಿಕೊಳ್ಳಲು ನಗರಸಭೆಗೆ ಅರ್ಜಿ ನೀಡಿದ್ದು, ಇದಕ್ಕೆ ವಕ್ಫ್ ಅಧಿಕಾರಿಗಳು ನ್ಯಾಯಾಲಯದ ಆದೇಶ ಮೀರಿ ಸಹಕಾರ ನೀಡಿದರು ಎಂದು ಆಪಾದಿಸಿದರು. ಕೂಡಲೇ ಮಹಾಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆದು ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟವನ್ನು ಮುಂದುವರೆಸುವದಾಗಿ ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿ ಶಾದತ್ ಅವರು, ಜಾಮೀಯಾ ಮಸೀದಿಯ ಜಾಗದ ದಾನಿಗಳು ಸಮಿತಿಯೊಂದನ್ನು ರಚಿಸಿ ಸಭೆ ನಡೆಸಿ, ಮುತುವಲ್ಲಿಯವರನ್ನು ನೇಮಕ ಮಾಡಿ ವರದಿ ನೀಡಿದ್ದಾರೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಜಾಮೀಯಾ ಮಸೀದಿಗೆ ಯಾವದೇ ಮುತುವಲ್ಲಿಯ ಅವಶ್ಯಕತೆ ಇಲ್ಲ. ಕೂಡಲೇ ಈ ನೀತಿ ಬದಲಾಗಬೇಕು. ಮಸೀದಿಯಲ್ಲಿ ಎಲ್ಲರಿಗೂ ಸಮಾನ ಗೌರವ ಸಿಗುವಂತಾಗಬೇಕು ಎಂದು ಆಗ್ರಹಿಸಿದರು. ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಕೂಡ ಮುತವಲ್ಲಿ ಎಂದು ಕರೆಸಿಕೊಳ್ಳುವವರ ಅನುಮತಿ ಪಡೆಯಬೇಕೆಂಬ ನಿಲುವು ಜಾಮೀಯಾ ಮಸೀದಿಯಲ್ಲಿ ಕೆಲವರು ಜಾರಿಮಾಡಿ ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆ ರೀತಿ ಯಾವದೇ ನಿಯಮ ಗಳನ್ನು ಜಾರಿ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಆ ಬಗ್ಗೆ ವಕ್ಫ್ ಮಂಡಳಿಗೆ ದೂರು ನೀಡುವಂತೆ ಅಧಿಕಾರಿ ಶಾದತ್ ಹೇಳಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಮಹಮದ್ ಶಾಫಿ, ಮಹಮದ್ ಇಮ್ರಾನ್, ಷರೀಫ್, ಮತ್ತಿತರರು ಇದ್ದರು.