ಸೋಮವಾರಪೇಟೆ, ಮಾ. 5: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಳ್ಳರ ಹಾವಳಿ ಮಿತಿಮೀರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಾಡಹಗಲೇ ಕಳ್ಳತನಕ್ಕಿಳಿದಿರುವ ಖದೀಮರು, ನಡುರಾತ್ರಿಯಲ್ಲೂ ತಮ್ಮ ಕೃತ್ಯ ಮುಂದುವರೆಸಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.ಕಳೆದ ನಾಲ್ಕೈದು ತಿಂಗಳಿನಿಂದ ಕಡಿಮೆಯಾಗಿದ್ದ ಕಳ್ಳರ ಹಾವಳಿ, ಇದೀಗ ಮರುಕಳಿಸಿದ್ದು, ಒಂದೇ ಒಂದು ಪ್ರಕರಣವನ್ನು ಭೇದಿಸಲು ಪೊಲೀಸರಿಂದ ಸಾಧ್ಯವಾಗಿಲ್ಲ. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಇದೆಯೋ ಅಥವಾ ಮಲಗಿದೆಯೋ ಎಂಬ ಸಂಶಯ ಸಾರ್ವಜನಿಕರನ್ನು ಕಾಡುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವ ಪ್ರಸ್ತಾವನೆಯೂ ಮೂಲೆಗೆ ಬಿದ್ದಿದೆ.

ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಅಬ್ಬೂರುಕಟ್ಟೆಯ ವಿಜಯ ಬ್ಯಾಂಕ್‍ನಲ್ಲಿ ಡಿ ದರ್ಜೆ ನೌಕರರಾಗಿರುವ ಜಯಮ್ಮ ಎಂಬವರ ಮನೆಗೆ ನುಗ್ಗಿರುವ ಕಳ್ಳರ ತಂಡ ಬರೋಬ್ಬರಿ 4.25ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರಣ ಹಾಗು 30ಸಾವಿರ ರೂ.ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದೆ.

ಮನೆಯ ಹಿಂಬಾಗಿಲನ್ನು ಒಡೆದು ಒಳ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ಹಾಗು ನಗದನ್ನು ದೋಚಿ ಪರಾರಿಯಾಗಿದೆ. ಇದಾದ ನಂತರ ಹೊನ್ನವಳ್ಳಿ ಗ್ರಾಮ ನಿವಾಸಿಗಳಾದ ಎಚ್.ಎನ್.ಮಹೇಶ್ ಮತ್ತು ಎಚ್.ಎನ್.ಮಂಜುನಾಥ್ ಮನೆಗೆ ಹಾಡಹಗಲೇ ನುಗ್ಗಿರುವ ಕಳ್ಳರು 12 ಸಾವಿರ ರೂ. ನಗದು ಹಾಗು 4 ಗ್ರಾಂ ಚಿನ್ನ ಮತ್ತು ಮಂಜುನಾಥ್ ಅವರ ಮನೆಯಲ್ಲಿ 10 ಸಾವಿರ ನಗದು, 4 ಗ್ರಾಂನ ಚಿನ್ನದ ಸರ ಕಳವು ಮಾಡಿದ್ದಾರೆ.

ಪಟ್ಟಣದ ಜನತಾ ಕಾಲೋನಿಯಲ್ಲಿ ಶುಭಾಕರ್ ಎಂಬವರ ಬೈಕ್ ಕಳ್ಳತನವಾಗಿದೆ. ಇತ್ತೀಚೆಗೆ ಕರ್ಕಳ್ಳಿಯ ಶಿವಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗು 8 ಸಾವಿರ ರೂ.ನಗದನ್ನು ಕಳವು ಮಾಡಿದ್ದಾರೆ. ಈ ಪ್ರಕರಣಗಳನ್ನು ಭೇದಿಸಲು ಪೊಲೀಸರು ವಿಫಲರಾಗುತ್ತಿದ್ದಂತೆ ತಾ. 2ರ ರಾತ್ರಿ ಸಮೀಪದ ಆಲೇಕಟ್ಟೆ ರಸ್ತೆಯಲ್ಲಿರುವ ಆರ್‍ಎಂಸಿ ಪ್ರಾಂಗಣದ ಎದುರಿನ ಅಶ್ವಥಕಟ್ಟೆ ಪಶ್ಚಿಮಾಭಿಮುಖಿ ಗಣಪತಿ ದೇವಾಲಯದ ಕಾಣಿಕೆ ಹುಂಡಿ ಒಡೆದು ಹಣ ದೋಚಲಾಗಿದೆ.

ರಾತ್ರಿ ವೇಳೆ ಕಳ್ಳತನ ನಡೆದಿರಬಹುದಾದ ಸಾಧ್ಯತೆಯಿದ್ದು, ದೇವಾಲಯದ ಒಳಗಿದ್ದ ಕಾಣಿಕೆ ಡಬ್ಬ ಒಡೆದು ಒಳಗಿದ್ದ ಹಣವನ್ನು ಅಪಹರಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪರಿಕರಗಳನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಕಾಲ್ಕಿತ್ತಿದ್ದಾರೆ. ಇದರೊಂದಿಗೆ ದೇವಾಲಯದ ಅನತಿ ದೂರದಲ್ಲಿರುವ ಮಾನಸ ಸಭಾಂಗಣದ ಎದುರು ನಿಲ್ಲಿಸಲಾಗಿದ್ದ ಪಲ್ಸರ್ ಬೈಕ್‍ನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಳೆದ ಹತ್ತು ದಿನಗಳಲ್ಲೇ ಐದಾರು ಕಳ್ಳತನ ಪ್ರಕರಣ ವರದಿಯಾಗಿದೆ. ರಾತ್ರಿ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದಾರೋ ಇಲ್ಲವೋ ? ಎಂಬ ಸಂಶಯ ಮೂಡುವಂತೆ ಮಾಡಿದೆ. ಚಾಣಾಕ್ಷ ಕಳ್ಳರನ್ನು ಹೆಡೆಮುರಿ ಕಟ್ಟಲು ಇಲಾಖೆ ಮುಂದಾಗಿದ್ದರೂ ಕಳ್ಳರು ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.