“ಶಕ್ತಿ”ಯು ಪತ್ರಿಕಾರಂಗಕ್ಕೆ ಪದಾರ್ಪಣೆ ಮಾಡಿ ತನ್ನ 60 ಸಂವತ್ಸರಗಳನ್ನು ಪೂರ್ಣಗೊಳಿಸಿ ಕೊಂಡು ಷಷ್ಠ್ಯಬ್ದಿಯನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ತುಂಬು ಹೃದಯದ ಅಭಿನಂದನೆಗಳು. ಬೆಟ್ಟಗಾಡುಗಳಿಂದ ಕೂಡಿದ್ದು ಅತಿವಿರಳ ಜನಸಂಖ್ಯೆಯನ್ನು ಹೊಂದಿದ್ದ ಅಂದಿನ ಕೊಡಗು ಜಿಲ್ಲೆಯಲ್ಲಿ ಜನರೊಂದಿಗೆ ಸಂವಹನವೆನ್ನುವದು ತುಂಬಾ ಕಷ್ಟಕರವಾಗಿತ್ತು. ಆದರೂ ಎದೆಗುಂದದ “ಶಕ್ತಿ”ಯು, ಅಂತಹ ಎಲ್ಲ ಅಡೆ-ತಡೆಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಪತ್ರಿಕಾರಂಗದಲ್ಲಿ ತನ್ನ ಛಾಪನ್ನು ಮೂಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಕೇವಲ ವಾರ್ತೆಗಳಿಗಷ್ಟೇ ತನ್ನನ್ನು ಮೀಸಲಾಗಿರಿಸಿಕೊಳ್ಳದೆ ಜನಪ್ರಿಯ ಕೈಂಕರ್ಯಗಳಲ್ಲೂ ಭಾಗಿಯಾಗಿ ‘‘ಶಕ್ತಿ’’ಯು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ದುರ್ಬಲರಿಗೆ ಆರ್ಥಿಕ ಸಹಾಯ ಹಸ್ತವನ್ನು ಚಾಚುವದರೊಂದಿಗೆ ಕೊಡಗಿಗೆ ಮಾರಕವಾಗಿದ್ದ ಕಂಬದ ಕಡ ಅಣೆಕಟ್ಟೆ ಯೋಜನೆಯನ್ನು ಕೈಬಿಡಲು, ಕಾಫಿ ಬೆಳೆಗೆ ಮುಕ್ತ ಮಾರುಕಟ್ಟೆಯನ್ನು ಒದಗಿಸಲು ಸಾಕಷ್ಟು ಪ್ರಚಾರವನ್ನೊದಗಿಸಿ ಸರಕಾರದ ಧೋರಣೆಗಳನ್ನು ಬದಲಿಸಲು “ಶಕ್ತಿ”ಯು ಬಳಸಿದ ಚಾತುರ್ಯವು ಪ್ರಶಂಸನೀಯವಾಗಿದೆ.

ಸಾಹಿತ್ಯಕ್ಕೂ ಒತ್ತು ನೀಡಿ ಕೊಡಗಿನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿ ತುಂಬುವದರೊಂದಿಗೆ ಪ್ರತಿ ವರ್ಷವೂ ತನ್ನ ಹುಟ್ಟುಹಬ್ಬದಂದು ಹಲವು ಸಾಹಿತ್ಯಿಕ ಸ್ಪರ್ಧೆಗಳನ್ನು ನೀಡಿ ಕೊಡಗಿನ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುವ “ಶಕ್ತಿ”ಯ ಚಿಂತನೆಗಳು ಪತ್ರಿಕಾರಂಗಕ್ಕೊಂದು ಮಾದರಿಯೆನಿಸಿವೆ.

ಬರಲಿರುವ ವರ್ಷಗಳಲ್ಲಿ ಇನ್ನಿತರ ಜನಪ್ರಿಯ ಯೋಜನೆಗಳೊಂದಿಗೆ “ಶಕ್ತಿ”ಯು ಇನ್ನೂ ಹೆಚ್ಚಿನ ಓಜಸ್ಸು, ವರ್ಚಸ್ಸು ಹಾಗೂ ತೇಜಸ್ಸುಗಳನ್ನು ಮೈಗೂಡಿಸಿಕೊಂಡು ಮತ್ತಷ್ಟು ಎತ್ತರಕ್ಕೆ ಬೆಳೆದು ಪತ್ರಿಕಾರಂಗದಲ್ಲಿ ಶತಕವನ್ನೂ ಬಾರಿಸಲಿ ಎನ್ನುವ ಹಾರೈಕೆಯು ನಮ್ಮದು.

? ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು