ಕುಶಾಲನಗರ, ಮಾ. 3: ರಾಜ್ಯದ ಸಂಪತ್ತು ಕೊಳ್ಳೆ ಹೊಡೆದು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಸರ್ಕಾರದ ಕೆಲವು ಸಚಿವರುಗಳು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ನಗರ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಗಣಪತಿ ದೇವಾಲಯದ ಎದುರು ಸೇರಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ.ಪಂ. ಅಧ್ಯಕ್ಷ ಎಂ.ಎಂ. ಚರಣ್, ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹಣ ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಸಂದಾಯ ಮಾಡಿರುವದು ಗೋವಿಂದರಾಜ್ ಅವರ ಡೈರಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಕ್ಷದ ಹಿರಿಯ ಮುಖಂಡ ಜಿ.ಎಲ್. ನಾಗರಾಜ್ ಮಾತನಾಡಿ, ಹೈಕಮಾಂಡ್‍ಗೆ ಕಪ್ಪ ನೀಡಿರುವ ದಾಖಲೆಗಳು ಡೈರಿ ಮೂಲಕ ಬಹಿರಂಗ ಆಗಿರುವದರಿಂದ ಕಾಂಗ್ರೆಸ್‍ಗೆ ತೀವ್ರ ಮುಜುಗರ ಆಗಿದೆ. ಇದರಿಂದ ತಪ್ಪಿಸಿಕೊಳ್ಳಲು ಈಗ ನೋಟು ಅಮಾನ್ಯಿಕರಣ ವಿರುದ್ಧ ಪ್ರತಿಭಟನೆಗೆ ಇಳಿದಿದೆ. ಅಲ್ಲದೆ ಯಡಿಯೂರಪ್ಪ ವಿರುದ್ಧ ದ್ವೇಷ ರಾಜಕಾರಣವನ್ನೂ ನಡೆಸುತ್ತಿದೆ ಎಂದು ಆರೋಪಿಸಿದರು.

ನಗರ ಬಿಜೆಪಿ ಕಾರ್ಯದರ್ಶಿ ಶಿವಾಜಿರಾವ್, ಯುವ ಮೋರ್ಚಾದ ಎಂ.ಡಿ. ಕೃಷ್ಣಪ್ಪ, ಚಂದ್ರು, ನಿಡ್ಯಮಲೆ ದಿನೇಶ್, ಕೆ.ಎನ್. ದೇವರಾಜ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್, ಶಿವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ನಾಡಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಂದಾಯ ಅಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮನವಿಪತ್ರ ಸಲ್ಲಿಸಿದರು.