ಕುಶಾಲನಗರ / ಸುಂಟಿಕೊಪ್ಪ, ಮಾ. 3 : ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ಅಗ್ನಿ ಜ್ವಾಲೆಯಿಂದ ಸಂಪೂರ್ಣ ಭಸ್ಮವಾಗಿದೆ. ಅರಣ್ಯಕ್ಕೆ ಬೆಂಕಿ ತಗುಲಿದ್ದು ಕ್ಷಣ ಮಾತ್ರದಲ್ಲಿ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದ್ದು, ಈ ನಡುವೆ ಭಾರೀ ಪ್ರಮಾಣದಲ್ಲಿ ಪಕ್ಷಿ ಪ್ರಾಣಿಗಳು ಅಗ್ನಿಗೆ ಆಹುತಿಯಾಗಿದ್ದು, ಪ್ರಾಣಿ, ಪಕ್ಷಿ ಸಂಕುಲ ಅಪಾಯದಲ್ಲಿ ಸಿಲುಕಿದೆ.ಬೆಂಕಿ ಕೆನ್ನಾಲಿಗೆ ಆವರಿಸುವ ದರೊಂದಿಗೆ ಕುಶಾಲನಗರ-ಮಡಿಕೇರಿ ಕಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಗೆತುಂಬಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯ ನಾಗರೀಕರು ಬೆಂಕಿಯ ಕೆನ್ನಾಲಿಗೆ ರಸ್ತೆಯ ಇನ್ನೊಂದು ಬದಿಯ ಮೀಸಲು ಅರಣ್ಯಕ್ಕೆ ತಗುಲದಂತೆ ಕಾರ್ಯಾ ಚರಣೆಯಲ್ಲಿ ತೊಡಗಿದ್ದರು.

ಅಗ್ನಿಶಾಮಕ ತಂಡದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೂ, ನೀರಿನ ಅಭಾವದ ಹಿನ್ನಲೆಯಲ್ಲಿ ಬೆಂಕಿಯ ಜ್ವಾಲೆ ಇಡೀ ಅರಣ್ಯವನ್ನು ನಾಶಪಡಿಸಿದ ದೃಶ್ಯ ಗೋಚರಿಸಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಗೊಂಡಿದೆ. ಕಳೆದ 3 ದಿನಗಳ ಹಿಂದೆ ಹೇರೂರು ವ್ಯಾಪ್ತಿಯ ಬೆಟ್ಟದಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳ ಹಾಗೂ ಅರಣ್ಯ ಅಧಿಕಾರಿಗಳು ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದÀರು. ಈ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಬೆಟ್ಟ ಪ್ರದೇಶ ಸಂಪೂರ್ಣ ಬೆಂಕಿಗೆ ಆಹುತಿಯಾದ ದೃಶ್ಯ ಗೋಚರಿಸಿದೆ.

ಮತ್ತೆ ಅರಣ್ಯದಲ್ಲಿ ಬೆಂಕಿ ಕಂಡುಬಂದು

(ಮೊದಲ ಪುಟದಿಂದ) ಆ ಭಾಗದ ಅರಣ್ಯ ಸಂಪೂರ್ಣ ಭಸ್ಮಗೊಳ್ಳುವದರೊಂದಿಗೆ, ಅತ್ತೂರು ಮೀಸಲು ಅರಣ್ಯದ ಸಾವಿರಕ್ಕೂ ಅಧಿಕ ಎಕರೆ ಸುಟ್ಟು ಹೋಗಿವೆ. ಸಂಜೆ ತನಕ ಬೆಂಕಿ ಹತೋಟಿಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾದಿ üಕಾರಿ ಸೂರ್ಯಸೇನ್, ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ಅರಣ್ಯ ವಲಯಾಧಿಕಾರಿ ನೆಹರು ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಹಾಗೂ ಗ್ರಾಮಾಂತರ ಠಾಣೆ ಸಿಬ್ಬಂದಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಕಾರ್ಯತತ್ಪರರಾಗಿದ್ದಾರೆ.

ಸೋಮವಾರಪೇಟೆ, ಮಡಿಕೇರಿ, ವೀರಾಜಪೇಟೆ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು ಬೆಂಕಿ ಹತೋಟಿಗೆ ತರಲು ಶ್ರಮಿಸುತ್ತಿದ್ದಾರೆ. ಭಾರೀ ಗಾಳಿ ಹಿನ್ನಲೆಯಲ್ಲಿ ಇಡೀ ಬೆಂಕಿ ಜ್ವಾಲೆ ಕ್ಷಣಮಾತ್ರದಲ್ಲಿ ಅರಣ್ಯವನ್ನು ಆಹುತಿ ಪಡೆದುಕೊಂಡಿದೆ. ಬೆಂಕಿಯ ಕೆನ್ನಾಲಿಗೆಯಿಂದ ಗಾಳಿಯ ಮೂಲಕ ನೆರೆಯ ಹೊಸಕೋಟೆ, ಸುಂಟಿಕೊಪ್ಪ, ಮಡಿಕೇರಿ ಭಾಗಕ್ಕೂ ದಟ್ಟವಾದ ಹೊಗೆ ವ್ಯಾಪಿಸಿದ್ದು, ಅನಾಹುತದ ತೀವ್ರತೆಯನ್ನು ಎತ್ತಿ ತೋರಿಸುತ್ತಿತ್ತು. ವರದಿ ಮಾಡಲು ತೆರಳಿದ ಸುದ್ದಿಗಾರರು ಬೆಂಕಿಯ ಕೆನ್ನಾಲಿಗೆಯ ಅಪಾಯಕ್ಕೆ ಸಿಲುಕುವಂತಹ ಪರಿಸ್ಥಿತಿಯೂ ಸೃಷ್ಠಿಯಾಗಿತ್ತು. ಜಿಂಕೆ ಮತ್ತಿತರ ವನ್ಯಜೀವಿಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಾಡುತ್ತಿದ್ದ ದೃಶ್ಯ ಮಾತ್ರ ಮನ ಕಲಕುವಂತಿತ್ತು.

ಬೆಂಗಳೂರಿಗೆ ಕಾರ್ಯನಿಮಿತ್ತ ತೆರಳಿರುವ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಶಕ್ತಿಯೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದ್ದು, ಹೆಚ್ಚಿನ ಪ್ರಮಾಣದ ಅನಾಹುತ ಸಂಭವಿಸದಂತೆ ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವೀರಾಜಪೇಟೆ ವಿಭಾಗದ ಸಿಬ್ಬಂದಿಗಳನ್ನು ಬೆಂಕಿ ನಂದಿಸಲು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಅರಣ್ಯಾಧಿಕಾರಿ, ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಬೆಂಕಿಯ ಕೆನ್ನಾಲಿಗೆ ಆನೆಕಾಡು ಮೀಸಲು ಅರಣ್ಯಕ್ಕೆ ತಗುಲದಂತೆ ಎಚ್ಚರವಹಿಸುತ್ತಿದ್ದಾರೆ. ಕುಶಾಲನಗರದ ಎರಡು ಅಗ್ನಿಶಾಮಕ ವಾಹನಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಬೆಂಕಿ ಹತೋಟಿಗೆ ಬರದೆ ಆನೆಕಾಡು ಮೀಸಲು ಅರಣ್ಯಕ್ಕೂ ಹಬ್ಬಿದೆ. ಆನೆಕಾಡು ಮರದ ಡಿಪೋಗೆ ಬೆಂಕಿ ತಗಲುವ ಅಪಾಯವಿದೆ. ಕೋಟಿಗಟ್ಟಲೆ ಮರ ದಾಸ್ತಾನು ಮಾಡಲಾಗಿದೆ. ಮಡಿಕೇರಿ, ಕುಶಾಲನಗರ, ಪಿರಿಯಾಪಟ್ಟಣ, ಸೋಮವಾರಪೇಟೆ ಅಗ್ನಿಶಾಮಕ ತಂಡಗಳು ಬಂದು ಕಾರ್ಯಾ ಚರಿಸುತ್ತಿವೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ರಾತ್ರಿಯಾದ ಕಾರಣ ಅರಣ್ಯದ ಒಳಹೋಗಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ಬೆಂಕಿ ಹಬ್ಬಿದ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು, ಸುಂಟಿಕೊಪ್ಪ ವಾಹನ ಸಂಚಾರ ಸ್ಥಗಿತಗೊಂಡಿದೆ. ಬದಲಿ ರಸ್ತೆ ಮೂಲಕ ವಾಹನ ಚಲಿಸುತ್ತಿವೆ. ಅಗ್ನಿಶಾಮಕ ದಳದವರಿಗೆ ನೀರಿನ ಅಭಾವ ತಲೆದೋರಿದೆ.

ಆಕಸ್ಮಿಕವಾಗಿ ಅತ್ತೂರು ಹಾಗೂ ಆನೆಕಾಡು ಅರಣ್ಯ ಪ್ರದೇಶ, ಕಲ್ಲೂರು ಬೆಟ್ಟ ಪ್ರದೇಶದಲ್ಲಿ ಬೆಂಕಿ ತಗುಲಿ ಇಡೀ ಕೊಡಗರಹಳ್ಳಿ, ಏಳನೇ ಹೊಸಕೋಟೆ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಸಸ್ಯ ಸಂಕುಲಗಳು, ಕಾಡು ಪ್ರಾಣಿ, ಪಕ್ಷಿಗಳು, ಉರಗಗಳು ಸುಟ್ಟು ಕರಕಲಾಗಿವೆ.

ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ, ಪೊಲೀಸರು ಪಂಚಾಯಿತಿ ಯವರ, ಸಾರ್ವಜನಿಕರ ಸಮಯೋಚಿತ ಕಾರ್ಯಾ ಚರಣೆಯಿಂದ ಕೊಡಗರಹಳ್ಳಿ, ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಅರಣ್ಯದ ಅಂಚಿನಲ್ಲಿರುವ ಮನೆಗೆ ಬೆಂಕಿ ತಗಲುವದನ್ನು ತಪ್ಪಿಸಲಾಗಿದೆ.

ಇಂದು ಬೆಳ್ಳಂಬೆಳಿಗ್ಗೆ ಕಲ್ಲೂರು ಬೆಟ್ಟ ಪ್ರದೇಶ, ಯಡವನಾಡು, ಅತ್ತೂರು ಅರಣ್ಯ ಅಂಚಿನಲ್ಲಿ ಅಕಸ್ಮಿಕವಾಗಿ ಬೆಂಕಿ ಬಿದ್ದು ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಹರಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಅಗ್ನಿ ಶಾಮಕ ದಳದವರಿಗೆ ದೂರವಾಣಿ ಕರೆ ಮಾಡಿದರೂ ಬೆಳಿಗ್ಗೆ 10.30 ರ ಸುಮಾರಿಗೆ ಮಡಿಕೇರಿ ಮತ್ತು ಕುಶಾಲನಗರದಿಂದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಗ್ರಾಮಸ್ಥರು ಕೊಡಗರಹಳ್ಳಿ, ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರು, ಪೊಲೀಸರು, ಅರಣ್ಯ ಇಲಾಖೆಯವರು ಬೆಂಕಿ ನಂದಿಸಲು ಸಾಥ್ ನೀಡಿದರು. ಆದರೆ ಅರಣ್ಯದ ಮರಗಳಿಗೆ, ಬಿದಿರಿಗೆ ಬೆಂಕಿ ಹತ್ತಿ ಧಗಧಗ ಉರಿಯುತ್ತಿರುವ ಅಗ್ನಿಯ ಆರ್ಭಟವನ್ನು ಹತೋಟಿಗೆ ತರಲು ಸಾದ್ಯವಾಗಲಿಲ್ಲ. ಮತ್ತೊಂದೆಡೆ ಅಗ್ನಿಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿದ್ದು,ಬೆಂಕಿ ನಂದಿಸುವ ಕಾರ್ಯಾಚರಣೆಗೆ ಅಡ್ಡಿಯಾಯಿತು.

150 ಮನೆಗಳ ರಕ್ಷಣೆ : ಏಳನೇ ಹೊಸಕೋಟೆಯ ಮೆಟ್ನಳ್ಳ ಸೇತುವೆಯಿಂದ ಅಂದಗೋವೆ ಪೈಸಾರಿಗೆ ಹಾದು ಹೋಗುವ ರಸ್ತೆ ಬದಿಯಲ್ಲಿ 150 ಕ್ಕೂ ಅಧಿಕ ಮನೆಗಳಿದ್ದು ಆನೆಕಾಡು ಅರಣ್ಯ ಪ್ರದೇಶಕ್ಕೆ ಬೆಂಕಿ ಹಬ್ಬಿದ ಅನತಿ ದೂರದಲ್ಲೆ ಮನೆಗಳಿದ್ದು, ಅಗ್ನಿಶಾಮಕ ದಳದವರು ಬೆಂಕಿ ಈಚೆಗೆ ಬರದಂತೆ ನೀರು ಹಾಕಿ ಶಮನ ಗೊಳಿಸಲು ಪ್ರಯತ್ನಿಸಿದರು.

ಕುಶಾಲನಗರದಿಂದ ಬಂದ ಅಗ್ನಿಶಾಮಕ ದಳದ ವಾಹನದಲ್ಲಿದ್ದ ನೀರು ಬೆಂಕಿ ನಂದಿಸಲು ಬಳಸಿ ಖಾಲಿಯಾಗಿದ್ದು, ಆನಂತರ ಏಳನೇ ಹೊಸಕೋಟೆಯ ದಾಸಂಡ ರಮೇಶ್ ಚಂಗಪ್ಪ ಅವರ ಕೆರೆಯಿಂದ ಈ ವಾಹನಕ್ಕೆ ನೀರು ತುಂಬಿಸಲು ಮುಂದಾದಾಗ ಅಗ್ನಿಶಾಮಕ ವಾಹನ ಕೆಟ್ಟು ನಿಂತಿತು. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಯಿತು. ಕೆರೆಯ ಬಳಿಗೆ ಹೋಗಲು ಸಿಬ್ಬಂದಿಗಳು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪಂಪ್ ಸೆಟ್ ಕೂಡ ಕೈ ಕೊಟ್ಟಿತು.

ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಅರಣ್ಯಾಧಿಕಾರಿ ಸೂರ್ಯಸೇನಾ, ನೆಹರು, ರಂಜನ್, ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೆಗೌಡ, , ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಎಎಸ್‍ಐ ಪಾರ್ಥ, ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಸುಂಟಿಕೊಪ್ಪ ನಗರದಲ್ಲಿ ಆನೆಕಾಡಿಗೆ ಬೆಂಕಿ ಬಿದ್ದ ಪರಿಣಾಮ ಬೂದಿ ಆವರಿಸಿದ್ದು, ವಾತಾವರಣ ಮಬ್ಬು ಕವಿದಂತಾಗಿತ್ತು.