ಶನಿವಾರಸಂತೆ, ಮಾ. 3: ಶನಿವಾರಸಂತೆ ಸಮೀಪದ ಕಾಜೂರು ಗ್ರಾಮದ ಕಾಡು ಜಾಗದಲ್ಲಿ ಮಿನಿ ಲಾರಿ (ಕೆಎ-20 ಸಿ 545)ರಲ್ಲಿ ಅಕ್ರಮವಾಗಿ ಬಳಂಜಿ ಮರಗಳನ್ನು ಸಾಗಾಟ ಮಾಡುತ್ತಿರುವದಾಗಿ ದೊರೆತ ಮಾಹಿತಿ ಮೇರೆಗೆ, ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಮಿನಿ ಲಾರಿಯನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಗುಂಡುರಾವ್ ಬಡಾವಣೆಯ ನಿವಾಸಿ ಸಿ.ಎಲ್. ರೇವಣ್ಣ ಹಾಗೂ ಮಿನಿ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಯು. ಖತೀಜ, ಸಿಬ್ಬಂದಿಗಳಾದ ಎಂ.ಬಿ. ರವೀಂದ್ರ, ಸಂತೋಷ್ ಕುಮಾರ್ ಪಾಲ್ಗೊಂಡಿದ್ದರು.