ಮಡಿಕೇರಿ, ಮಾ.1 : ರಾಷ್ಟ್ರವ್ಯಾಪಿ ಜಾರಿಗೆ ತರಲು ಉದ್ದೇಶಿಸಲಾಗಿರುವ ಏಕ ರೂಪದ ‘ಜಿಎಸ್‍ಟಿ’ ತೆರಿಗೆಗೆ ಸಂಬಂಧಿಸಿದಂತೆ ವರ್ತಕ ಸಮುದಾಯ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸುವ ‘ಜಿಎಸ್‍ಟಿ ತೆರಿಗೆ ವಿಚಾರ ಸಂಕಿರಣ’ ಇದೇ ಮಾ.4 ರಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚೇಂಬರ್‍ನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಗಿರೀಶ್ ಗಣಪತಿ, ವಿಚಾರ ಸಂಕಿರಣ ಸೆಂಟ್ರಲ್ ಎಕ್ಸೈಸ್ ಸಹಕಾರ ದೊಂದಿಗೆ ಸೂಚಿತ ದಿನದಂದು ಬೆಳಗ್ಗೆ 10.30 ಗಂಟೆಗೆ ನಗರದ ಹೋಟೆಲ್ ವ್ಯಾಲಿವ್ಯೂನಲ್ಲಿ ನಡೆಯಲಿದೆ. ಇದರಲ್ಲಿ ವರ್ತಕ ಸಮುದಾಯ, ಸಾರ್ವಜನಿಕರು ಪಾಲ್ಗೊಂಡು ಜಿಎಸ್‍ಟಿ ತೆರಿಗೆಯ ಕುರಿತ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು.

ಚೇಂಬರ್ ನಿರ್ದೇಶಕಿ ಮೊಂತಿ ಗಣೇಶ್ ಮಾತನಾಡಿ, ವಿಚಾರ ಸಂಕಿರಣದಲ್ಲಿ ಸೆಂಟ್ರಲ್ ಎಕ್ಸೈಸ್‍ನ ಜೋನಲ್ ಕಮೀಷನರ್ ರಾಜ್ ಕುಮಾರ್, ಸರ್ವಿಸ್ ಟ್ಯಾಕ್ಸ್‍ನ ಕಮೀಷನರ್ ಎಂ. ವಿನೋದ್ ಕುಮಾರ್, ಕಸ್ಟಮ್ಸ್‍ನ ಕಮೀಷನರ್ ರಾಜೀವ್ ತಿವಾರಿ, ಸೆಂಟ್ರಲ್ ಎಕ್ಸೈಸ್‍ನ ಕಮೀಷನರ್ ಜಿ.ವಿ. ಕೃಷ್ಣರಾವ್ ಪಾಲ್ಗೊಂಡು ಜಿಎಸ್‍ಟಿ ಕುರಿತು ಸಮಗ್ರ ಮಾಹಿತಿ ಒದಗಿಸಲಿದ್ದಾರೆ.

ಪ್ರಸ್ತುತ ವ್ಯಾಟ್, ಸರ್ವೀಸ್ ಟ್ಯಾಕ್ಸ್, ಸೇಲ್ಸ್ ಟ್ಯಾಕ್ಸ್ ಮೊದಲಾದ ತೆರಿಗೆಗಳಿವೆ. ಮುಂಬರುವ ದಿನಗಳಲ್ಲಿ ಇವೆಲ್ಲವೂ ಜಿಎಸ್‍ಟಿ ಮೂಲಕ ಏಕ ರೂಪದ ತೆರಿಗೆಯಾಗಿ ಮಾರ್ಪಡಲಿದೆ. ಕೊಡಗಿನಲ್ಲಿ ಸಣ್ಣವರ್ತಕ ಸಮೂಹ ಹೆಚ್ಚಾಗಿದ್ದು, ಇವರುಗಳು ತೆರಿಗೆ ಕುರಿತಾದ ತಮ್ಮ ಸಂಶಯಗಳನ್ನು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಬಗೆಹರಿಸಿಕೊಳ್ಳಲು ಅವಕಾಶವಿದೆ ಯೆಂದು ಮೊಂತಿ ಗಣೇಶ್ ತಿಳಿಸಿದರು. ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿ ಸಮೂಹ ಪಾಲ್ಗೊಂಡು ಮಾಹಿತಿಯನ್ನು ಪಡೆದುಕೊಳ್ಳ ಬಹುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಹನೀಫ್, ನಿರ್ದೇಶಕರು ಗಳಾದ ಬಾಬುಚಂದ್ರ ಉಳ್ಳಾಗಡ್ಡಿ ಹಾಗೂ ಅಂಬೆಕಲ್ ನವೀನ್ ಉಪಸ್ಥಿತರಿದ್ದರು.