ಸಿದ್ದಾಪುರ, ಮಾ.1 : ಹಾಡಹಗಲಲ್ಲಿ ಪಟ್ಟಣದ ಸಮೀಪ ಒಂಟಿ ಸಲಗವೊಂದು ಪ್ರತ್ಯಕ್ಷ ಗೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇಂದು ಮಧ್ಯಾಹ್ನ ವೇಳೆಯಲ್ಲಿ ಸಿದ್ದಾಪುರ ಪಟ್ಟಣದ ಮಡಿಕೇರಿ ರಸ್ತೆಯ ರಿವರ್ ಸೈಡ್ ತೋಟದಿಂದ ಮುಖ್ಯ ರಸ್ತೆಯ ಮೂಲಕ ಒಂಟಿ ಸಲಗವೊಂದು ರಾಜಾರೋಷವಾಗಿ ಹಾದು ಹೋಗಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಭಯಭೀತರಾಗಿ ವಾಹನವನ್ನು ನಿಲ್ಲಿಸಿದ್ದಾರೆ. ಕಾಡಾನೆಯು ಕೆಲಕಾಲ ರಸ್ತೆಯಲ್ಲೇ ನಿಂತಿದ್ದು, ಬಳಿಕ ಕುರುಬರಮೊಟ್ಟೆ ತೋಟಕ್ಕೆ ತೆರಳಿದೆ.

ಸಿದ್ದಾಪುರ ವ್ಯಾಪ್ತಿಯ ಗುಹ್ಯ, ಹೈಸ್ಕೂಲ್ ಸಮೀಪ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗುಹ್ಯ ಗ್ರಾಮದಲ್ಲಿ ಒಟ್ಟು 15 ಕಾಡಾನೆಗಳು ಬೀಡುಬಿಟ್ಟಿದ್ದು, ಕಾಡಾನೆಯನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.