ನಾಪೋಕ್ಲು, ಮಾ. 1: ಮನುಷ್ಯನಿಗೆ ಹುಟ್ಟು ಮತ್ತು ಸಾವು ನಿಶ್ಚಿತ. ತಾನು ಮಾಡಿ ಕಟ್ಟಿ ಇಟ್ಟದ್ದು ಮತ್ತು ಜೀವ ಶಾಶ್ವತ ಅಲ್ಲ. ಆದರೆ ರೈತಾಪಿ ವರ್ಗ ಪವಿತ್ರವಾದ ಭಗವಂತನ ಶಕ್ತಿಗಳನ್ನು ಆರಾಧಿಸುತ್ತಾ, ದೇವಾಲಯಗಳ ನಿರ್ಮಾಣ ಮಾಡುತ್ತಾ ಬಂದಿದ್ದು, ಆರಾಧಿಸುವ ದೇವರುಗಳಲ್ಲಿ ಭೇದಭಾವ ಕಂಡಿಲ್ಲ. ಈ ಮೂಲಕ ರೈತಾಪಿವರ್ಗ ಸಂಸ್ಕøತಿ ಉಳಿಸುವದರೊಂದಿಗೆ ದೇವಾಲಯ ಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಅವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ದೇವಾಲಯದಲ್ಲಿ ಶ್ರೀ ದೇವರು ಮತ್ತು ಉಪದೇವರುಗಳನ್ನು ಪ್ರತಿಷ್ಠಾಪಿಸಿ, ಇಂದಿನಿಂದ ತಾ.11ರವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿ ಮಾತನಾಡಿದರು. ಭಾರತೀಯ ಸನಾತನ ಹಿಂದೂ ಧರ್ಮದ ಸಂಸ್ಕøತಿಯನ್ನು ತಲೆಮಾರಿನ ಹಿರಿಯರು, ಯೋಗಿಗಳು ಹಾಕಿಕೊಟ್ಟ ರೀತಿಯಲ್ಲಿ ನಾವು ಮುನ್ನಡೆಸುತ್ತಾ ಬಂದಿದ್ದೇವೆ. ಮಲ್ಲಿಕಾರ್ಜುನ ದೇವಾಲಯಕ್ಕೆ 500 ಸಾವಿರ ವರ್ಷಗಳ ಇತಿಹಾಸ ಇದೆ. ಈ ದೇವಾಲಯದಲ್ಲಿ ಶಿವಲಿಂಗವನ್ನು ಕಣ್ವಮಹರ್ಷಿಗಳೀಂದ ಸ್ಥಾಪಿಸಲ್ಪಟ್ಟಿದ್ದರಿಂದ ಸಾಕಷ್ಟು ಪಾವಿತ್ರ್ಯತೆ ಇದೆ. ಈ ಸೀಮೆಯ ಎಲ್ಲರೂ ಧನ್ಯರು. ಇಲ್ಲಿ ಆರ್ಯ ಮತ್ತು ದ್ರಾವಿಡ ಸಂಸ್ಕøತಿಯನ್ನು ಬಿಂಬಿಸುತ್ತಿದೆ. ಇದು ಶಿವ ಮತ್ತು ವಿಷ್ಣುವಿನ ಸಾನಿಧ್ಯದ ಬಗ್ಗೆ ತೋರಿಸುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪವಿತ್ರಪಾಣಿ ಕುಮಾರಸ್ವಾಮಿ ಬೈಪಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್‍ಕುತ್ತಮೊಟ್ಟೆ, ದೇವಳದ ಆಡಳಿತಾಧಿಕಾರಿ ಕೆಂಪಲಿಂಗಪ್ಪ, ಕಾರ್ಯ ನಿರ್ವಹಣಾಧಿಕಾರಿ ಹರಿಶ್ಚಂದ್ರ ಉಪಸ್ಥಿತರಿದ್ದರು. ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಯಂ. ಕಿಶೋರ್‍ಕುಮಾರ್ ಉಳುವಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ, ಕಾರ್ಯಾಧ್ಯಕ್ಷ ಸೋಮಶೇಖರ ಕೊೈಂಗಾಜೆ ವಂದಿಸಿದರು. ಸಭಾ ಕಾರ್ಯಕ್ರಮದ ಸಂಚಾಲಕ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿ, ಸಹಸಂಚಾಲಕ ಪುರುಷೋತ್ತಮ ಕಿರ್ಲಾಯ ಸಭಾಕಾರ್ಯವನ್ನು ನಿರ್ವಹಿಸಿದರು.

-ದುಗ್ಗಳ ಸದಾನಂದ