ವೀರಾಜಪೇಟೆ, ಮಾ. 1: ಆಸ್ತಿ ವೈಷಮ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಭೆಯಲ್ಲಿ ಯುವಕ ನೋರ್ವ ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗಲಿದ ವ್ಯಕ್ತಿ ಗಂಭೀರ ಗಾಯಗಳಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಲ್ಲಿಗೆ ಸಮೀಪದ ಬಾಳುಗೋಡು ನಿವಾಸಿ, ಮೋಹನ್ (ಮಿಟ್ಟು -73) ಎಂಬವರ ಮೇಲೆ ಅವರ ಸಹೋದರ ಜಯರಾಜ್ ಎಂಬವರ ಪುತ್ರ ಇದೀಗ ತಾನೇ ಪದವಿ ಮುಗಿಸಿ ಬಂದಿರುವ ಅನಿಲ್ (23) ಎಂಬಾತ ಇಂದು ರಾತ್ರಿ ವೇಳೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಮೋಹನ್ ಅವರ ಕಿಬ್ಬೊಟ್ಟೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವೈಷಮ್ಯ ಕಲಹಕ್ಕೆ ಕಾರಣವೆನ್ನ ಲಾಗಿದ್ದು, ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕರು, ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.