ಮಡಿಕೇರಿ, ಫೆ. 7: ಮಡಿಕೇರಿ ನಗರದಾದ್ಯಂತ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಬಹುತೇಕ ಡಾಮರು ರಸ್ತೆಗಳು ಬಲಿಯಾಗಿವೆ. ಕೆಲವೊಂದು ಕಡೆಗಳಲ್ಲಿ ಪ್ಯಾಚ್ ಹಾಕಲಾಗಿದೆಯಾದರೂ ಅದೂ ಕೂಡ ಕಿತ್ತು ರಸ್ತೆ ಪೂರಾ ಧೂಳು - ಕಲ್ಲುಗಳಿಂದ ತುಂಬಿದೆ. ಇದೀಗ ಕಾಂಕ್ರಿಟ್ ರಸ್ತೆಗಳ ಸರದಿ ಗುಡ್ಡಗಾಡು ಹಾಗೂ ಶೀತ ಪ್ರದೇಶವಾಗಿರುವ ಮಡಿಕೇರಿ ನಗರದಲ್ಲಿ ಸುಸಜ್ಜಿತ, ಶಾಶ್ವತವಾದ ರಸ್ತೆ ಒದಗಿಸುವ ಸಲುವಾಗಿ ಲಕ್ಷಗಟ್ಟಲೆ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಅದರಲ್ಲೂ ಜೂನಿಯರ್ ಕಾಲೇಜು ರಸ್ತೆ ಹಾಗೂ ಹಿಲ್ ರಸ್ತೆಗಳು ಕಳಪೆ ಕಾಮಗಾರಿಯಿಂದಾಗಿ ಕಿತ್ತು ಹೋಗಿ ಕಾಲೇಜು ರಸ್ತೆಯಲ್ಲಿ ಕಾಂಕ್ರಿಟ್ ಮೇಲೆ ಡಾಮರು ಹಾಕಲಾಗಿದೆ. ಹಿಲ್ ರಸ್ತೆ ಈಗಲೂ ಹೊಂಡಾ - ಗುಂಡಿಯಾಗಿಯೇ ಇದೆ.
ಆದರೆ, ಮಾರುಕಟ್ಟೆ ಬಳಿಯಿಂದ ಮುಂದುವರಿದಿರುವ ರಸ್ತೆ ಸುಸಜ್ಜಿತವಾಗಿದ್ದು, ಇದೀಗ ಒಳಚರಂಡಿಗೆ ಬಲಿಯಾಗುತ್ತಿದೆ. ಕಾಂಕ್ರಿಟ್ ರಸ್ತೆಯನ್ನು ಒಡೆದು ಪೈಪ್ಗಳನ್ನು ಅಳವಡಿಸಲಾಗಿದೆ. ಮೊದಲೇ ಕುಂಟುತ್ತಾ ಸಾಗಿರುವ ಮಾರುಕಟ್ಟೆ ಕಾಮಗಾರಿಯ ಕಿರಿಕಿರಿ ಒಂದೆಡೆಯಾದರೆ ಇದೀಗ ಮತ್ತೊಂದು ಕಿರಿ - ಕಿರಿ, ಮೀನು - ಮಾಂಸ ವ್ಯಾಪಾರಿಗಳ ಪಡಿಪಾಟಲು ಹೇಳತೀರದ್ದಾಗಿದೆ.
ಅಧಿಕಾರಿಗಳು ಹೇಳುವ ಪ್ರಕಾರ ಅಭಿವೃದ್ಧಿ ಆಗಬೇಕಾದರೆ ಕೆಲವೊಂದು ಸಮಸ್ಯೆಗಳು ಇರುತ್ತವೆ. ಅದು ಸಹಜ ಕೂಡ, ಆದರೆ, ಒಳಚರಂಡಿಗೆ ಎಷ್ಟೋ ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತದನಂತರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೆಷ್ಟು ಸರಿ ಎಂಬದು ನಾಗರಿಕರ ಪ್ರಶ್ನೆ? ಒಮ್ಮೆ ಕಾಂಕ್ರಿಟ್ ರಸ್ತೆಗೆ ಹಾನಿಯಾಯಿ ತೆಂದರೆ ಮತ್ತೆ ಅದನ್ನು ಸಹಜ ಸ್ಥಿತಿಗೆ ತರಲು ಸಾಧ್ಯವೇ ಎಂಬದು ಪ್ರಶ್ನೆ..?
- ಸಂತೋಷ್
 
						