ಮಡಿಕೇರಿ, ಫೆ. 2: ಶ್ರೀಗಂಧದ ಮರವನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಡಿ. ಪವನೇಶ್ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಪ್ರಕರಣದ ಸಾರಾಂಶದಿನಾಂಕ 14.9.2013 ರಂದು ರಾತ್ರಿ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದು, ಊರುಗುತ್ತಿ ಗ್ರಾಮದ ಯು.ಇ. ನಾಣಯ್ಯ ಅವರ ಕಾಫಿ ತೋಟದಲ್ಲಿದ್ದ ಶ್ರೀಗಂಧದ ಮರವನ್ನು ಆರೋಪಿಗಳಾದ ಕುಂದ ಗ್ರಾಮದ ಎನ್.ಎ. ಹಸೈನಾರ್ ಮತ್ತು ಬ್ಯಾಡಗೊಟ್ಟ ಗ್ರಾಮದ ಮಜೀದ್ ಅಕ್ರಮವಾಗಿ ಸಾಗಾಟ ಮಾಡಲು ಕಡಿಯುತ್ತಿದ್ದಾರೆ ಎಂದು ಮಾಹಿತಿ ದೊರೆತ ಮೇರೆಗೆ ಪೊಲೀಸ್ ವೃತ್ತ ನಿರೀಕ್ಷಕ ಎನ್.ಹೆಚ್. ಸಿದ್ದಯ್ಯ ಅವರು ದಿನಾಂಕ 15.9.2013 ರಂದು ಬೆಳಿಗ್ಗೆ 7.30 ಗಂಟೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಧಾಳಿ ಮಾಡಿ ಪರಿಶೀಲಿಸಿದಾಗ ಸ್ಥಳದಲ್ಲಿ ಆರೋಪಿಗಳು ಕಡಿದ ಶ್ರೀಗಂಧದ ಮರದ ತುಂಡುಗಳನ್ನು ಪತ್ತೆ ಹಚ್ಚಲಾಗಿದ್ದು, ಸ್ಥಳದಲ್ಲಿ ಕತ್ತಿ ಮತ್ತು ಗರಗಸವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ ಅಪರಾಧಕ್ಕಾಗಿ ಪ್ರಕರಣ ನೋಂದಾಯಿಸಿ ಕೊಳ್ಳಲಾಗಿತ್ತು.
ಆರೋಪಿ ಮಜೀದ್ ಓಡಿ ಹೋಗಿ ತಲೆ ಮರೆಸಿಕೊಂಡಿದ್ದನು. ಆರೋಪಿಗಳು ಸುಮಾರು 8000 ರೂ. ಬೆಲೆ ಬಾಳುವ ಶ್ರೀಗಂಧದ ಮರವನ್ನು ಕಳ್ಳತನದಿಂದ ಕಡಿದು ಸಾಗಾಟ ಮಾಡಲು ಯತ್ನಿಸಿರುವದು ಸಾಬೀತಾಗಿದೆ ಎಂದು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ನಡೆಸಿದ್ದು, ಸಾಕ್ಷಿಗಳ ವಿಚಾರಣೆಯಿಂದ ಆರೋಪಿ ಎನ್.ಎ. ಹಸೈನಾರ್ ಕೃತ್ಯ ಎಸಗಿರುವದು ಸಾಬೀತಾಗಿದೆ ಎಂದು ಆತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಈತನಿಗೆ ಶ್ರೀಗಂಧದ ಮರವನ್ನು ಪರವಾನಿಗೆ ಇಲ್ಲದೇ ಕಡಿದು ಬೀಳಿಸಿದ ಅಪರಾಧಕ್ಕಾಗಿ 5 ವರ್ಷಗಳ ಕಠಿಣ ಸಜೆ ಮತ್ತು ರೂ. 50 ಸಾವಿರ ದಂಡ ಪಾವತಿಸಲು ವಿಧಿಸಲಾಗಿದೆ ಮತ್ತು ಶ್ರೀಗಂಧದ ಮರವನ್ನು ಮಾರಾಟ ಮಾಡಲು ಸ್ಥಳದಿಂದ ಸಾಗಿಸಿದ ಅಪರಾಧಕ್ಕಾಗಿ 5 ವರ್ಷಗಳ ಕಠಿಣ ಸಜೆ ಮತ್ತು ರೂ. 50 ಸಾವಿರ ದಂಡವನ್ನು ವಿಧಿಸಲಾಗಿದೆ. ಆರೋಪಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಿದ ಅಪರಾಧಕ್ಕಾಗಿ ಮತ್ತೆ 2 ವರ್ಷಗಳ ಕಠಿಣ ಸಜೆ ಮತ್ತು ರೂ. 2 ಸಾವಿರ ದಂಡವನ್ನು ವಿಧಿಸಲಾಗಿದೆ. ಈ ಎಲ್ಲಾ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಲಾಗಿದೆ. ಎರಡನೇ ಆರೋಪಿ ಮಜೀದ್ ವಿರುದ್ಧ ಪ್ರಕರಣ ಸಾಬೀತಾಗದ ಕಾರಣ ಆತನನ್ನು ಬಿಡುಗಡೆ ಮಾಡಲಾಗಿದೆ.
ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದಾರೆ.