ಮಡಿಕೇರಿ, ಫೆ. 1: ಕೊಡಗು ಜಿಲ್ಲೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಿಜೆಪಿ ಅಸ್ತವ್ಯಸ್ಥಗೊಳಿಸುತ್ತಿದೆಯೆಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಅವರಿಗೆ ಸಭಾ ನಡಾವಳಿಯ ಬಗ್ಗೆ ತರಬೇತಿಯ ಅಗತ್ಯವಿದೆಯೆಂದು ವ್ಯಂಗ್ಯವಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯತ್‍ನ ಮಹಿಳಾ ಅಧ್ಯಕ್ಷರ ವಿರುದ್ಧ ಅಭಿಮನ್ಯು ಕುಮಾರ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೀಸಲಾತಿ ಆಧಾರದಲ್ಲಿ ಅಧ್ಯಕ್ಷ ಸ್ಥಾನ ಪಡೆದಿರುವ ಸಂಭಾವಿತ ಮಹಿಳೆಯನ್ನು ಅಧಿಕಾರದ ದರ್ಪದಿಂದ ಅಗೌರವ ತೋರುತ್ತಿದ್ದಾರೆ. ಮಡಿಕೇರಿ ತಾ.ಪಂ. ಅಧ್ಯಕ್ಷರಾಗಿ ಸ್ವಚ್ಛ ಆಡಳಿತ ನೀಡಿದ ಬಿಜೆಪಿಯ ತಳೂರು ಕಿಶೋರ್ ಕುಮಾರ್ ಅವರಂತಹ ವ್ಯಕ್ತಿಗಳಿಂದ ಅಭಿಮನ್ಯು ಕುಮಾರ್ ಅವರಿಗೆ ತರಬೇತಿ ನೀಡುವ ಅಗತ್ಯವಿದೆಯೆಂದು ಟೀಕಿಸಿದರು.

ಎ.ಕೆ.ಎಸ್.ಗೆ ತಿರುಗೇಟು

ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೈನಾ, ಟೀಕಾ ಪ್ರಹಾರದ ಪ್ರವೃತ್ತಿಯನ್ನು ನಿಲ್ಲಿಸಿ ಸುಬ್ಬಯ್ಯ ಅವರು ಗತಕಾಲದ ವೈಭವಕ್ಕೆ ಮರಳುವದು ಸೂಕ್ತವೆಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ ಮೇಲೆ ಸುಬ್ಬಯ್ಯ ಅವರಿಗೆ ಪ್ರೀತಿ ಹೆಚ್ಚಾಗಿದೆಯೆಂದು ವ್ಯಂಗ್ಯವಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ದಿಡ್ಡಳ್ಳಿ ವಿಚಾರದಲ್ಲಿ ಅಭಿನಂದನಾರ್ಹ ರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸುಬ್ಬಯ್ಯ ಅವರು ಮಾಡಿರುವ ಟೀಕೆ ಖಂಡನೀಯವೆಂದರು.

ಚೆನ್ನಂಗಿ ಗ್ರಾಮದ ಸರ್ವೆ ಸಂಖ್ಯೆ 107/7 ರಲ್ಲಿ 4.40 ಏಕರೆ ಪ್ರದೇಶವನ್ನು ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಪಡೆದಿರುವ ಮುತ್ತಮ್ಮ ಅವರಂತಹ ನಕಲಿ ಹೋರಾಟಗಾರರನ್ನು ಮುಂದಿಟ್ಟುಕೊಂಡು ಸುಬ್ಬಯ್ಯ ಅವರು ನೈಜ ನಿರಾಶ್ರಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೈನಾ ಆರೋಪಿಸಿದರು.

ಅರಣ್ಯ ಅಧಿಕಾರಿಗಳಿಗೆ ನಿರಾಶ್ರಿತರು ರೂ. 6.80 ಲಕ್ಷ ನೀಡಿದ್ದಾ ರೆಂದು ಆರೋಪಿಸಲಾಗುತ್ತಿದ್ದು, ಈ ಹಣವನ್ನು ಬಡ ಜನರು ನೀಡಲು ಹೇಗೆ ಸಾಧ್ಯವೆಂದು ಅವರು ಪ್ರಶ್ನಿಸಿದರು. ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೊಪಣ್ಣ ಅವರ ವಿರುದ್ಧ ಸುಬ್ಬಯ್ಯ ಅವರು ಮಾಡುತ್ತಿರುವ ಟೀಕೆ ಅರ್ಥಹೀನ. ಕಾಂಗ್ರೆಸ್ ಮುಖಂಡ ಹಾಗೂ ಕೊಡಗಿನವರೇ ಆಗಿರುವ ಹರೀಶ್ ಬೋಪಣ್ಣ ಅವರು ಉಸ್ತುವಾರಿ ಸಚಿವರ ವಿಧಾನ ಪರಿಷತ್ ಸದಸ್ಯತ್ವದ ಅನುದಾನವನ್ನು ಕೊಡಗಿಗೆ ಹೆಚ್ಚು ವಿನಿಯೋಗವಾಗುವಂತೆ ನೋಡಿ ಕೊಳ್ಳುತ್ತಿದ್ದಾರೆ. ಹರೀಶ್ ಬೋಪಣ್ಣ ಅವರಿಂದ ಕೊಡಗಿಗೆ ಲಾಭವಾಗಿ ದೆಯೇ ಹೊರತು ನಷ್ಟವಾಗಿಲ್ಲವೆಂದು ಸಮರ್ಥಿಸಿ ಕೊಂಡರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರ ವಿರುದ್ಧ ಕೂಡ ಸುಬ್ಬಯ್ಯ ಅವರು ಟೀಕೆ ಮಾಡಿದ್ದಾರೆ. ಆದರೆ, ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀಣಾ ಅಚ್ಚಯ್ಯ ಅವರು 35 ಸಾವಿರ ಮತಗಳನ್ನು ಪಡೆದಿದ್ದರು. ಆದರೆ, ಎ.ಕೆ. ಸುಬ್ಬಯ್ಯ ಅವರು ಕೇವಲ 5 ಸಾವಿರ ಮತಗಳನ್ನು ಪಡೆದಿದ್ದನ್ನು ಕೊಡಗಿನ ಜನ ಮರೆಯುವದಿಲ್ಲ ವೆಂದು ಮೈನಾ ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಂಘಟಕ ಪಿ.ಎಲ್. ಸುರೇಶ್, ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಲೀಲಾ ಶೇಷಮ್ಮ, ನಗರ ಕಾಂಗ್ರೆಸ್ ಉಪಾಧ್ಯಕ್ಷ ನಾಣಯ್ಯ ಹಾಗೂ ಪ್ರಮುಖರಾದ ಎ.ಜಿ. ರಮೇಶ್ ಉಪಸ್ಥಿತರಿದ್ದರು.