ನವದೆಹಲಿ, ಫೆ. 1: ದೇಶದ ಗ್ರಾಮೀಣ ಕೃಷಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ 2017ರ ಬಜೆಟ್ ಅನ್ನು ಕೇಂದ್ರ ಅರ್ಥಖಾತೆ ಸಚಿವ ಅರುಣ್ ಜೇಟ್ಲಿ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು. ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದ್ದು, ಆದಾಯ ತೆರಿಗೆಯಲ್ಲಿಯೂ ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಿದ್ದಾರೆ. ಅನುದಾನ ಪಡೆಯುವಲ್ಲಿ ರಾಜಕೀಯ ಪಕ್ಷಗಳಿಗೆ ಮಾತ್ರ ಬರೆ ಎಳೆದಿದ್ದಾರೆ.
ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ಇದಾಗಿತ್ತು. ಈ ಬಾರಿಯ ಬಜೆಟ್’ನ ಒಟ್ಟು ಗಾತ್ರವು ರೂ. 21 ಲಕ್ಷದ 47 ಸಾವಿರ ಕೋಟಿಯಾಗಿದ್ದು, ಪ್ರಸಕ್ತ ವರ್ಷ ಸೇರಿ ಜೇಟ್ಲಿ ಅವರು ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. 1 ಗಂಟೆ 50 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿ ಹೇಳಿದರು.
ಈ ಬಾರಿಯ ಬಜೆಟ್‍ನಲ್ಲಿ ರಾಜಕೀಯ ಪಕ್ಷಗಳಿಗೆ ದೊಡ್ಡ ಶಾಕ್ ನೀಡಿದ ಜೇಟ್ಲಿಯವರು ತೆರಿಗೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಪ್ರಾಮಾಣಿಕ ತೆರಿಗೆದಾರರನ್ನು ಕೇಂದ್ರ ಸರ್ಕಾರ ಗೌರವದಿಂದ ನಡೆಸಿಕೊಳ್ಳಲಿದೆ ಎಂದು ಹೇಳುವ ಮೂಲಕ ವಿತ್ತ ಸಚಿವರು ತಮ್ಮ ಬಜೆಟ್ ಮಂಡನೆಯನ್ನು ಮುಕ್ತಾಯಗೊಳಿಸಿದರು.
ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.
ವಿವಿಧ ರೀತಿಯಲ್ಲಿ ಹಾಗೂ ಭಿನ್ನ ಆಯಾಮಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧನೆಗಾಗಿ ಕೆಲ ಪ್ರಮುಖ ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ಕೇಂದ್ರ ಬಜೆಟ್‍ನಲ್ಲಿ ಪರಿಚಯಿಸಲಾಗಿರುವ ಕೆಲ ಪ್ರಧಾನ ಅಭಿವೃದ್ಧಿ ಯೋಜನೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಪ್ರಧಾನಮಂತ್ರಿ ಅವಾಸ್ ಯೋಜನೆಗೆ 23 ಸಾವಿರ ಕೋಟಿ
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಬಜೆಟ್ ನಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ವರಮಾನ ಗುಂಪಿನ ಜನರಿಗಾಗಿ 15 ಸಾವಿರ ಕೋಟಿಯಿಂದ 23 ಸಾವಿರ ಕೋಟಿಗೆ ಬಜೆಟ್ ಹೆಚ್ಚಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭವಿ ಮನೆ ಖರೀದಿ, ಬಡ್ಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
ಫಸಲ್ ಭಿಮಾ ಯೋಜನೆ
ಫಸಲ್ ಭಿಮಾ ಯೋಜನೆ ಬೆಳೆ ಹಾನಿ ವಿಮೆಯಾಗಿದ್ದು, ಶೇ. 40ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಬೆಳೆ ಹಾನಿ ವಿಮೆ ಯೋಜನೆಯಾಗಿದ್ದು, ಕೇಂದ್ರ ಬಜೆಟ್ 2016 ಅನುಮೋದಿಸಲಾಗಿತ್ತು. ಪ್ರಾಕೃತಿಕ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮಳೆ ಇಲ್ಲದಿರುವದು, ಭೂಕುಸಿತ ಇತ್ಯಾದಿಗಳಿಂದ ಬೆಳೆ ನಾಶವಾದಲ್ಲಿ ಈ ಯೋಜನೆ ಅಡಿಯಲ್ಲಿ ಬೆಳೆ ಹಾನಿ ವಿಮೆ ಅಥವಾ ಪರಿಹಾರ ನೀಡಲಾಗುತ್ತದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 2011-14ರ ಅವಧಿಯಲ್ಲಿ ಇದ್ದ ಒಂದು ದಿನಕ್ಕೆ 73 ಕಿ.ಮೀ ರಸ್ತೆ ನಿರ್ಮಾಣ ಕಾರ್ಯವನ್ನು 2016-17ರ ಅವಧಿಯಲ್ಲಿ 133 ಕಿ.ಮೀಟರ್ ಗೆ ಹೆಚ್ಚಿಸಲಾಯಿತು. ಭಾರತ ಸರ್ಕಾರದಿಂದ ಆರಂಭಿಸಲಾದ ಈ ಯೋಜನೆ ದೇಶದ ಎಲ್ಲ ಭಾಗಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ.
ಅದ್ಭುತ ಭಾರತ ರಾಜ್ಯಗಳ ಸಹಭಾಗಿತ್ವದಲ್ಲಿ 5 ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಸ್ಥಾಪಿಸಲಾಗುವದು. ಅದ್ಭುತ ಭಾರತ ಪ್ರಚಾರವನ್ನು ಜಗತ್ತಿನಾದ್ಯಂತ ಪರಿಚಯಿಸಲಾಗುವದು.
ನರೇಗಾ ಯೋಜನೆಗೆ 48 ಸಾವಿರ ಕೋಟಿ
ನರೇಗಾ ಯೋಜನೆಗೆ ರೂ. 48 ಸಾವಿರ ಕೋಟಿಯನ್ನು ಘೋಷಿಸಲಾಗಿದ್ದು, ಪ್ರಸ್ತುತ ಸಾಲಿನ ನರೇಗಾ ಯೋಜನೆಗಳಿಗೆ ಬಜೆಟ್‍ನಲ್ಲಿ ಈ ಬಾರಿ ದಾಖಲೆಯ 48 ಸಾವಿರ ಕೋಟಿ ಮೀಸಲಿರಿಸಲಾಗಿದೆ.
ವಿದ್ಯುತ್ ಯೋೀಜನೆಗಳಿಗೆ 4500 ಕೋಟಿ ಒದಗಿಸಲಾಗುವದು. ಇದರ ಜತೆಗೆ ಗ್ರಾಮೀಣ ಶಿಕ್ಷಣ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಗಮನ ನೀಡಲಾಗುವದು.
ಪ್ರಸ್ತುತ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಸಾರಿಗೆ ಕ್ಷೇತ್ರಕ್ಕೆ 2.41 ಕೋಟಿ ಮೀಸಲಿರಿಸಿದ್ದು, ಕರಾವಳಿ ಭಾಗದ ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮಕ್ಕೆ ಹೆಚ್ಚಿನ ಗಮನ ನೀಡಲಾಗಿದೆ.
ರೇಲ್ವೆ ವಲಯ ಮುಂದಿನ 5 ವರ್ಷಗಳ ಅವಧಿಗೆ ರೈಲ್ವೆ ಸುರಕ್ಷತಾ ಧನವನ್ನು 1 ಲಕ್ಷ ಕೋಟಿ ಮೂಲನಿಧಿಯಾಗಿ ಪರಿವರ್ತಿಸಲಾಗುವದು. ರೈಲ್ವೆ ಇ-ಟಿಕೇಟ್ ಮೇಲಿನ ಸೇವಾ ಶುಲ್ಕ ತೆರಿಗೆ ರದ್ದು ಪಡಿಸಲಾಗುವದು. 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‍ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಲಾಗುವದು ಎಂದು ಜೇಟ್ಲಿ ಹೇಳಿದ್ದಾರೆ.
ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ 2017-18 ಸಾಲಿನಲ್ಲಿ ರೈತರಿಗೆ ಕೃಷಿ ಸಾಲದ ಮಿತಿ 10 ಲಕ್ಷ ಕೋಟಿಗೆ ಏರಿಸಲಾಗುವದು. ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ 1,87,223 ಕೋಟಿ ಮೀಸಲು ಇರಿಸಲಾಗಿದೆ. ಕಳೆದ ಬಾರಿಗಿಂತ ಇದು 24% ಹೆಚ್ಚಳ ಮಾಡಲಾಗಿದೆ. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಜತೆಗೆ ರೈತರಿಗೆ ಮಣ್ಣು ಆರೋಗ್ಯ ಕಾರ್ಡು ವಿತರಣೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.