ಮಡಿಕೇರಿ, ಫೆ. 2: ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 - 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೊವಾದಿ ರೆಡ್ ಕಾರಿಡಾರ್ - ಐಎಸ್‍ಐಎಸ್ ವಾದಿಗಳ ಗ್ರೀನ್ ಘಜ್ವಾ ತುರ್ ಹಿಂದ್ ಕಾರಿಡಾರ್ ಪಿತೂರಿಯ ಮೂಲಕ ಕೊಡವ ಕುಲವನ್ನು ಮೂಲೋತ್ಪಾಟನೆ ಮಾಡಲು ಹೊಂಚು ಹಾಕುತ್ತಿರುವ ಅಂತರರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಿಸಬೇಕೆಂದು ಆಗ್ರಹಿಸಿ ಸಿ.ಎನ್.ಸಿ ಆಶ್ರಯದಲ್ಲಿ ಇತ್ತೀಚೆಗೆ ಕಡಂಗ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಮಾತನಾಡಿ, ಟಾಟಾ ಸೇರಿದಂತೆ 300 ಕ್ಕೂ ಅಧಿಕ ಬಂಡವಾಳ ಶಾಹಿಗಳು, ಭೂಗತ ಪಾತಕಿಗಳು, ಹವಾಲ ರೆಡ್ಡಿಗಳು ಮತ್ತು ಎನ್.ಆರ್.ಐ ಉದ್ಯಮ ಪತಿಗಳು ತಮ್ಮ ಸಕ್ರಮ ಆಸ್ತಿಯೊಂದಿಗೆ ಕಬಳಿಸಿರುವ ಸಾವಿರಾರು ಎಕರೆ ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಮಾಜಿ ಸೈನಿಕರಿಗೆ ಹಂಚಬೇಕೆಂದು ಸಿ.ಎನ್.ಸಿ ಸಂಘಟನೆ 2012 ರಲ್ಲಿ ಆಂದೋಲನ ರೂಪಿಸಿದ್ದು ಇಲ್ಲಿಯ ತನಕ ಅವರ ಮೇಲೆ ಒಂದೇ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿಲ್ಲ. ಒತ್ತುವರಿ ತೆರವಾಗಲಿಲ್ಲ. ಬದಲಿಗೆ ಎಕರೆಯೊಂದಕ್ಕೆ 3 ಲಕ್ಷ ರೂ ಹಣ ಕಟ್ಟಿಸಿಕೊಂಡು ಗುಟ್ಟಾಗಿ ಸಕ್ರಮಗೊಳಿಸಲಾಗುತ್ತಿದ್ದು, ಸರಕಾರ ಕೊಡವರಿಗೆ ಮತ್ತು ಮಾಜಿ ಸೈನಿಕರಿಗೆ ಕಿರುಕುಳ ನೀಡುತ್ತಿದೆ. ಇದು ನಿಲ್ಲಬೇಕೆಂದು ನಾಚಪ್ಪ ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಂಗ ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷ ಪಾಂಡಂಡ ಕಿಟ್ಟು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೇಪಡಿಯಂಡ ಬಿದ್ದಪ್ಪ, ಕೋದಂಡ ಸುಬ್ಬಯ್ಯ, ಬೇಪಡಿಯಂಡ ದಿನು, ಚೆಂಬಂಡ ಜನತ್, ಬಲ್ಲಚಂಡ ಟಿಟ್ಟು, ಬಲ್ಲಟಿಕಾಳಂಡ ಮುದ್ದಯ್ಯ, ಬಲ್ಯಂಡ ಉದಯ, ಕೋಡಿರ ವಿನೋದ್, ಬೊಳಕಾರಂಡ ತಿಲಕ್ ಮತ್ತು ಐತಿಚಂಡ ಭೀಮಯ್ಯ ಮುಂತಾದವರು ಭಾಗವಹಿಸಿದ್ದರು.