ಸೋಮವಾರಪೇಟೆ, ಫೆ. 1: ರೈತರು ಉಪ ಬೆಳೆಯನ್ನು ಬೆಳೆಯುವತ್ತ ಗಮನಹರಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ತೋಟಗಾರಿಕಾ ಇಲಾಖೆ ವಿಷಯ ತಜ್ಞ ಡಾ. ಬಿ.ಸಿ. ನಂಜಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ವತಿಯಿಂದ ಇಲ್ಲಿಗೆ ಸಮೀಪ ಕಿಕ್ಕರಳ್ಳಿ ಗ್ರಾಮದ ಕೊಚ್ಚೇರ ಅನಿಲ್ ಮತ್ತು ಕೆ. ಪಾಲು ಅವರ ತೋಟದಲ್ಲಿ ಏರ್ಪಡಿಸಲಾಗಿದ್ದ ತರಕಾರಿ ಬೆಳೆ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಕೇವಲ ಒಂದು ಅಥವಾ ಎರಡು ಬೆಳೆಯತ್ತ ಚಿಂತನೆ ನಡೆಸಿದರೆ ಜೀವನ ಮಟ್ಟ ಸುಧಾರಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಉಪ ಬೆಳೆಯನ್ನು ಅವಲಂಬಿಸಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ. ರೈತರು ಪರಿಸರಕ್ಕೆ ಪೂರಕವಾದ ಬೆಳೆಗಳನ್ನು ಬೆಳೆಸಬೇಕು. ಈ ನೆಲದ ಮಣ್ಣಿಗೆ ರಾಸಾಯನಿಕದಂತಹ ವಿಷವನ್ನು ಬೆರೆಸಿದಾಗ ಮನುಷ್ಯನ ಆರೋಗ್ಯದೊಂದಿಗೆ ಪ್ರಾಣಿ, ಪಕ್ಷಿಗಳ ಜೀವಕ್ಕೂ ಅಪಾಯ ಒದಗುತ್ತದೆ ಎಂದರು.

ಸಾವಯವ ಗೊಬ್ಬರದ ಮೂಲಕ ಅಧಿಕ ಇಳುವರಿ ಪಡೆಯಲು ಸಾಧ್ಯ. ಗರ್ವಾಲೆ ಗ್ರಾಮದ ಬೆಳೆಗಾರರು ಕರಿಮೆಣಸು ಕೃಷಿಯಲ್ಲಿ ತೊಡಗುವಾಗ ಇಲ್ಲಿನ ಹವಾಗುಣಕ್ಕೆ ಹೊಂದುವ ಆದಿ ಅಥವಾ ಕರಿಮುಂಡ ತಳಿಯನ್ನು ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಭಾರತ ಸರಕಾರ ‘ಒಂದು ಹನಿ- ಅಧಿಕ ಇಳುವರಿ’ ಎಂಬ ಸಿದ್ಧಾಂತದೊಂದಿಗೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ರೈತರು ಇಲಾಖೆಯಿಂದ ದೊರಕುವ ಸವಲತ್ತುಗಳನ್ನು ಬಳಸಿಕೊಳ್ಳಬೇಕು. ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳಬೇಕೇ ವಿನಃ ಮಧ್ಯವರ್ತಿಗಳನ್ನು ಅವಲಂಬಿಸಬಾರದು ಎಂದು ಕಿವಿಮಾತು ಹೇಳಿದರು. ರೈತರಿಗೆ ಅನುಕೂಲವಾಗುವ ಉದ್ದೇಶದೊಂದಿಗೆ ಸೋಮವಾರಪೇಟೆಯಲ್ಲಿ ಶೀಘ್ರದಲ್ಲಿಯೇ ಹಾಫ್‍ಕಾಮ್ಸ್ ಮಳಿಗೆಯನ್ನು ಪ್ರಾರಂಭಿಸಲಾಗುವದು ಎಂದರು.

ಗರ್ವಾಲೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಗಣಪತಿ ಅವರು, ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಗರ್ವಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಾಮೇರ ಪಳಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬೊಟ್ಟೋಳಂಡ ಮುತ್ತಪ್ಪ, ಸಹಾಯಕ ತೋಟಗಾರಿಕಾ ಅಧಿಕಾರಿ ಗಣೇಶ್, ಹೇಮಂತ್ ಮತ್ತಿತತರು ಉಪಸ್ಥಿತರಿದ್ದರು.