ಶ್ರೀಮಂಗಲ, ಮೇ 2: ಈಗಾಗಲೇ ಹವಾಮಾನ ವೈಪರಿತ್ಯದಿಂದ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಕಳೆದ 2 ದಶಕದಿಂದ ನಷ್ಟದ ಹಾದಿಯಲ್ಲೆ ಸಾಗುತ್ತ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರು ಇದೀಗ ಬರ ಪರಿಸ್ಥಿತಿಯಿಂದ ಕಾಫಿ ಹಾಗೂ ಕರಿಮೆಣಸು ಫಸಲು ಸಂಪೂರ್ಣ ನಷ್ಟವಾಗಿದ್ದು, ಜಿಲ್ಲೆಯ ಕಾಫಿ ಬೆಳೆಗಾರರ ಎಲ್ಲಾ ಬ್ಯಾಂಕ್ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ, ಕಾವೇರಿ ಜಲಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಪರಿಸರ ಸ್ನೇಹಿಯಾದ ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಕಲ್ಪಿಸಬೇಕೆಂದು ಜಿಲ್ಲೆಗೆ ಆಗಮಿಸಿದ ರಾಜ್ಯ ಬರ ಅಧ್ಯಯನ ಸಮಿತಿಗೆ ಜಿಲ್ಲಾ ಬೆಳೆಗಾರ ಒಕ್ಕೂಟ ಮನವಿ ಸಲ್ಲಿಸಿತು.

ಗೋಣಿಕೊಪ್ಪದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಅವರನ್ನು ಭೇಟಿ ಮಾಡಿದ ಬೆಳೆಗಾರ ಒಕ್ಕೂಟದ ನಿಯೋಗಕ್ಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾ. 7ರಂದು ಮಡಿಕೇರಿಯಲ್ಲಿ ಸಭೆ ನಡೆಸಲಾಗುವದು ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಒಕ್ಕೂಟದಿಂದ ಕೆಟ್ಟು ಹೋದ ಬೋರ್‍ವೆಲ್‍ಗಳನ್ನು ಕೂಡಲೇ ಹೆಚ್.ಡಿ.ಪಿ.ಇ. ಪೈಪ್‍ಗಳನ್ನು ಅಳವಡಿಸಿ ದುರಸ್ತಿ ಮಾಡುವದು, ಬತ್ತಿ ಹೋಗಿರುವ ತೆರೆದ ಬಾವಿಗಳ ದುರಸ್ಥಿ ಹಾಗೂ ಬುಶ್ ಅಳವಡಿಕೆಗೆ ಕ್ರಮ, ಕೆರೆಗಳ ಹೂಳೆತ್ತಿ ನೀರು ಸಂಗ್ರಹಕ್ಕೆ ಯೋಜನೆ ರೂಪಿಸುವದು, ಕೋಟ್ಯಂತರ ಜನ ಜಾನುವಾರು ವ್ಯವಸಾಯಕ್ಕೆ ನೀರು ಒದಗಿಸುತ್ತಿರುವ ಕಾವೇರಿ ನದಿಯ ಜಲ ಸಂರಕ್ಷಣೆಗೆ, ಪರಿಸರ ಸ್ನೇಹಿಯಾದ ಕಾಫಿ ತೋಟಗಳ ಸಂರಕ್ಷಿಸಿಕೊಳ್ಳಲು ವಿಶೇಷ ಪ್ಯಾಕೇಜ್ ರೂಪಿಸುವದು, ಸಹಕಾರ ಸಂಘದಿಂದ ಲಭ್ಯವಿರುವ ಕೆ.ಸಿ.ಸಿ. ಸಾಲದ ಮಿತಿಯನ್ನು ಈಗಿನ 3 ಲಕ್ಷದಿಂದ 7 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ನೀಡುವದು. ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಏಕರೆವಾರು ನೀಡುವ ಬೆಳೆ ಸಾಲದ ಮಿತಿಯನ್ನು 1 ಲಕ್ಷಕ್ಕೆ ಏರಿಸುವದು. ಜಿಲ್ಲೆಯ ಕೃಷಿ ಭೂಮಿ ಹಾಗೂ ಇತರ ಜಾಗಗಳನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡುವದನ್ನು ತಕ್ಷಣ ನಿಷೇಧಿಸುವದು, ಜಿಲ್ಲೆಯಲ್ಲಿ ಅನಗತ್ಯವಾದ ಯೋಜನೆಗಳಿಂದ ಮರ ಹನನ ನಿರ್ಬಂಧಿಸಿ ಜಿಲ್ಲೆಯಲ್ಲಿ ಪರಿಸರ ಸ್ನೇಹಿಯಾದಂತಹ ಕನಿಷ್ಟ 10 ಲಕ್ಷ ಮರಗಳನ್ನು ಪ್ರತಿ ವರ್ಷ ನೆಡಲು ರೈತರಿಗೆ ಅವಕಾಶ ಕಲ್ಪಿಸುವ ವಿಶೇಷ ಯೋಜನೆ ರೂಪಿಸುವದು, ಜಿಲ್ಲೆಯಲ್ಲಿ ಸಾಲ ಭಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಕಲ್ಪಿಸಿ ಅವರು ಹೊಂದಿರುವ ಸಾಲಗಳನ್ನು ಮನ್ನಾ ಮಾಡುವದು, ಬ್ಯಾಂಕ್‍ಗಳ ಸಾಲ ವಸೂಲಾತಿ ತಡೆಹಿಡಿಯುವದು ಸೇರಿದಂತೆ ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಿ ಈ ಬಗ್ಗೆ ಸಮಿತಿಗೆ ವಿವರಿಸಿತು.

ಈ ಸಂದರ್ಭ ಬಿರುನಾಣಿಯಲ್ಲಿ ಅರಣ್ಯದಿಂದ ಉಂಟಾದ ಕಾಡ್ಗಿಚ್ಚಿಗೆ ತುತ್ತಾಗಿ ಬೆಳೆಗಾರ ಕೆ.ಎನ್. ಸೋಮಯ್ಯ ಅವರ 5 ಏಕರೆ ಕಾಫಿ ತೋಟ ಸುಟ್ಟು ಹೋಗಿರುವ ಪ್ರಕರಣದ ಬಗ್ಗೆ ಪರಿಹಾರ ನೀಡಲು ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು ಉಸ್ತುವಾರಿ ಸಚಿವರ ಗಮನ ಸೆಳೆದರು. ಈ ಬಗ್ಗೆ ಪರಿಹಾರ ಅರ್ಜಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಮೀರ್ ಅನಿಶ್ ಅಹಮದ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ನಿರ್ದೇಶಕ ಕೈಬುಲಿರ ಎಂ. ಹರೀಶ್, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ನಿಯೋಗದಲ್ಲಿದ್ದರು.