ಸೋಮವಾರಪೇಟೆ,ಮೇ 9: 12ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಮಹಾನ್ ದಾರ್ಶನಿಕ ಎನಿಸಿಕೊಂಡ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವೇ ಆಧುನಿಕ ಪ್ರಜಾಪ್ರಭುತ್ವದ ಆಧಾರವಾಗಿರುವ ಸಂಸತ್ತಿನ ಮೂಲ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಭೇದ ಭಾವಗಳ ನಿರ್ಮೂಲನೆಗೆ ಪ್ರಯತ್ನಿಸಿ ಎಲ್ಲರಲ್ಲೂ ಸಮಾನತೆಯ ಭಾವನೆಯನ್ನು ಬಸವಣ್ಣನವರು ಮೂಡಿಸಿದ್ದರು. ಇಂತಹ ಸಮಾಜ ಸುಧಾರಕ, ದಾರ್ಶನಿಕರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಬಸವಣ್ಣನವರು ಎಲ್ಲಾ ಧರ್ಮದವರನ್ನು ಒಂದೆಡೆ ಸೇರಿಸಿ ವಚನಗಳ ಮೂಲಕ ಸಮಾಜವನ್ನು ಸುಧಾರಣೆಗೆ ತರುವ ಪ್ರಯತ್ನ ಮಾಡಿದವರು. ಲೋಕ ಕಲ್ಯಾಣಕ್ಕಾಗಿ ಶ್ರಮಿಸಿ ಅಸ್ಪøಶ್ಯತೆ ಮತ್ತು ಜಾತಿ ಪದ್ದತಿಯನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದವರು ಎಂದು ನೆನಪಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇಲ್ಲಿನ ಜಲಾಲಿಯ ಮಸೀದಿಯ ಧರ್ಮ ಗುರುಗಳಾದ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೊಳಿ ಮಾತನಾಡಿ, ಇಂದು ಸಮಾಜದಲ್ಲಿ ಧರ್ಮ ಧರ್ಮಗಳ ನಡುವೆ ಸ್ಪರ್ಧೆ, ಅನಾರೋಗ್ಯಕರ ಪೈಪೋಟಿ ನಡೆಯುತ್ತಿರುವದು ದುರಂತ. ಧರ್ಮವನ್ನು ಕೇವಲ ಪ್ರತಿಷ್ಠೆಗಾಗಿ ಬಳಸಲಾಗುತ್ತಿದೆ. ಆದರೆ ಯಾರೂ ಧರ್ಮ ಪರಿಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಓ.ಎಲ್.ವಿ. ಚರ್ಚ್‍ನ ಧರ್ಮಗುರುಗಳಾದ ವಿನ್ಸೆಂಟ್ ಮೊಂತೇರೋ ಮಾತನಾಡಿ, ವಚನ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬಸವಣ್ಣನವರು 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆ ಕೇವಲ ಸರ್ಕಾರಿ ಕಾರ್ಯಕ್ರಮವಾಗಬಾರದು. ಎಲ್ಲ ಧರ್ಮದವರು ಒಟ್ಟಾಗಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕೆಂದು ಕರೆ ನೀಡಿದರು.

ವಿರಕ್ತ ಮಠದ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ಬಸವಣ್ಣನವರ ಜೀವನ ಕ್ರಮ ಮತ್ತು ಅವರ ವಚನ ಸಾಹಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಬಿ.ಸಿ.ಶಿವಪ್ಪ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಹದೇವಪ್ಪ, ತಾಲೂಕು ವಿರಶೈವ ಸಮಾಜದ ಅಧ್ಯಕ್ಷ ಕೆ.ಎನ್. ಶಿವಕುಮಾರ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಇಲ್ಲಿನ ಕಕ್ಕೆಹೊಳೆ ಸಮೀಪವಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಕ್ಕನ ಬಳಗದ ಸದಸ್ಯರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.