ಕೂಡಿಗೆ, ಮೇ 8: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರದ ರಸ್ತೆಯಾಗಿದೆ. ಈ ರಸ್ತೆಯು ತೀರಾ ಹದಗೆಟ್ಟಿದ್ದು, ದ್ವಿಚಕ್ರ ವಾಹನ, ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗಿದೆ. ಈ ರಸ್ತೆ ಕಳೆದ 10 ವರ್ಷಗಳಿಂದಲೂ ಒಂದಲ್ಲೊಂದು ಭರವಸೆಗಳ ನಡುವೆ ಸಾಗುತ್ತಾ ಬಂದಿದ್ದರೂ ಕಾಮಗಾರಿಯ ಮುಕ್ತಿ ಕಾಣದಂತಾಗಿದೆ.

ಇನ್ನೊಂದೆಡೆ ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿವೆ. ಯಲಕನೂರು, ಸೀಗೆಹೊಸೂರು ಸಮೀಪದಲ್ಲಿ ಕಲ್ಲುಕೋರೆಗಳಿದ್ದು, ಕಲ್ಲುಗಳನ್ನು ತುಂಬಿಸಿ 50ಕ್ಕೂ ಅಧಿಕ ಲಾರಿಗಳು ಈ ಮಾರ್ಗದಲ್ಲೇ ಚಲಿಸುವದರಿಂದ ರಸ್ತೆ ತೀರಾ ಹದಗೆಟ್ಟಿದೆ. ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಅನೇಕ ಬಾರಿ ಜಿಲ್ಲೆಯ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹರಿಸಲಾಗಿದೆ ಎಂದು ಸ್ಥಳೀಯ ಮುಖಂಡ ಜಿ.ಎಲ್. ನಾರಾಯಣ್ ಈ ವ್ಯಾಪ್ತಿಯ ಸಾರ್ವಜನಿಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಸ್ತೆ ಬದಿಯ ಮನೆಗಳು ಧೂಳುಮಯವಾಗುವದರ ಜೊತೆಗೆ ಧೂಳಿನಿಂದಾಗಿ ಈ ವ್ಯಾಪ್ತಿಯ ಜನರು ಕ್ಷಯ ರೋಗದಿಂದ ನರಳುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಭಾರೀ ಕಲ್ಲು ತುಂಬಿದ ಲಾರಿ ಚಲಿಸುವದರಿಂದ ರಸ್ತೆ ಬದಿಯ ಮನೆಯ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ.

ಈ ಮಾರ್ಗದಲ್ಲಿ ದಿನಂಪ್ರತಿ ಖಾಸಗಿ ಬಸ್ ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಚಲಿಸುತ್ತವೆ. ಆದರೆ ಸಮೀಪದ ಕೂಡಿಗೆ, ಕುಶಾಲನಗರಕ್ಕೆ ತಮ್ಮ ವ್ಯವಹಾರಿಕ ವಾಗಿ ಬರುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ದಿನಂಪ್ರತಿ ನರಳುವ ಯಾತನೆಯಾಗಿದೆ.

ಸಚಿವರ ಆದೇಶದನ್ವಯ 2 ಕಿ.ಮೀ. ರಸ್ತೆಗೆ ಡಾಂಬರು ಹಾಕಿದರೂ, ಇನ್ನುಳಿದ ಪಿಪಾಯಿಹಳ್ಳದಿಂದ ಮದಲಾಪುರದ ವರೆಗೆ ಯಾವದೇ ಡಾಂಬರು ಕಾಮಗಾರಿಯನ್ನು ಕೈಗೊಂಡಿಲ್ಲ. ಬ್ಯಾಡಗೊಟ್ಟ, ಶಿರಹೊಳಲು ಮತ್ತು ಮದಲಾಪುರ ರಸ್ತೆಯಲ್ಲಿ ಲಾರಿಗಳು ಚಲಿಸುವದರಿಂದ ರಸ್ತೆ ಗುಂಡಿ ಬಿದ್ದು ಹಾಳಾಗಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೀರಾ ತೊಂದರೆಯಾಗುತ್ತಿದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.

ಚುನಾವಣೆ ಸಂದರ್ಭ ಭರವಸೆ ನೀಡಿದ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದೆ ಹಿಡಿ ಶಾಪ ಹಾಕುತ್ತ ಸಂಚರಿಸುವಂತಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದಷ್ಟು ಶೀಘ್ರ ಕಾಮಗಾರಿಯನ್ನು ಪ್ರಾರಂಭಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವದೆಂದು ಸಾರ್ವಜನಿಕರು ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ