ಮಡಿಕೇರಿ, ಮೇ 7: ಹಾರಂಗಿ ಮೀನು ಉತ್ಪಾದನಾ ಕೇಂದ್ರದ ಪುನಃಶ್ಚೇತನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶನಿವಾರ ಚಾಲನೆ ನೀಡಿದರು.

ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಮೀನು ಉತ್ಪಾದನಾ ಹೊಳೆ ನಿರ್ಮಾಣದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಇರುವ ಹೊಳೆಯನ್ನು ಸುಧಾರಣೆ ಮಾಡುವದನ್ನು ಬಿಟ್ಟು ಪ್ರತ್ಯೇಕವಾಗಿ ಹೊಳೆ ನಿರ್ಮಾಣ ಮಾಡಿ ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವಂತೆ ಅವರು ಸಲಹೆ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಹೇಳಿದರು.

ಬಳಿಕ ಹಾರಂಗಿ ನೀರು ಹರಿಯುವ ಪ್ರದೇಶದಕ್ಕೆ ತೆರಳಿ ಮಹಾಶಿರ್ ಸಣ್ಣ ಮೀನುಗಳನ್ನು ನದಿಗೆ ಬಿಡಲಾಯಿತು. ಅಳಿವಿನಂಚಿನಲ್ಲಿರುವ ಮಹಾಶಿರ್ ಮೀನನ್ನು ಅಭಿವೃದ್ಧಿ ಪಡಿಸುವದರಿಂದ ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವದರ ಜೊತೆಗೆ ಪ್ರವಾಸೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯಪಟ್ಟರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ.ಸಿಇಓ ಚಾರುಲತಾ ಸೋಮಲ್, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್, ಭೂಸೇನಾ ನಿಗಮದ ಇಂಜಿನಿಯರ್ ಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು ಮತ್ತಿತರರು ಇದ್ದರು.