ಮಡಿಕೇರಿ, ಮೇ 5: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟ್ಟನ ಕಪ್ ಕ್ರಿಕೆಟ್ ಜಂಬರದ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ರೋಟರಿ ಮಿಸ್ಟಿ ಹಿಲ್ಸ್‍ನ ನಿಯೋಜಿತ ಅಧ್ಯಕ್ಷ ಮುಳಿಯ ಕೇಶವ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅನ್ನದಾನ ಮಹಾದಾನವಾಗಿದೆ. ಆದರೆ ಅನ್ನ ಎಷ್ಟು ಬೇಕೋ ಅಷ್ಟು ಮಾತ್ರ ಸೇವಿಸಲು ಸಾಧ್ಯ. ರಕ್ತದಾನ ಅದಕ್ಕಿಂತ ಮಿಗಿಲಾದ ಮಹಾದಾನವಾಗಿದ್ದು, ಒಂದು ಜೀವವನ್ನು ರಕ್ಷಿಸಬಹುದಾಗಿದೆ. ಇಂತಹ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು. ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಕುಂಜಿಲನ ಸತೀಶ್ ಪೂಣಚ್ಚ ಮಾತನಾಡಿ, ಉತ್ತಮ ಸೇವಾ ಕಾರ್ಯಗಳಿಗೆ ಮಿಸ್ಟಿ ಹಿಲ್ಸ್ ಸಹಯೋಗ ನೀಡುತ್ತಾ ಬರುತ್ತಿದೆ ಎಂದು ಹೇಳಿದರು. ಈ ಸಂದರ್ಭ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಶಿಸ್ತು ಸಮಿತಿ ಪದಾಧಿಕಾರಿ ಯಾಲದಾಳು ಹರೀಶ್, ರಕ್ತನಿಧಿ ಕೇಂದ್ರದ ಡಾ. ನಾಗರತ್ನ ಇನ್ನಿತರರಿದ್ದರು. ಇದೇ ಸಂದರ್ಭ 20 ಮಂದಿ ರಕ್ತದಾನ ಮಾಡಿದರು.