ಮಡಿಕೇರಿ, ಮೇ 9: ನಗರದ ಕೋಟೆ ಆವರಣದಲ್ಲಿರುವ ಕಸಾಪ ಜಿಲ್ಲಾ ಕಚೇರಿಯಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಬಸವೇಶ್ವರರು ವಚನ ಸಾಹಿತ್ಯ ಮೂಲಕ ಕನ್ನಡ ಭಾಷಾ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದರು. 12 ನೇ ಶತಮಾನದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಕನ್ನಡನಾಡು ಕಟ್ಟಲು ಶ್ರಮಿಸಿದ್ದರು ಎಂದು ಅವರು ಹೇಳಿದರು.

ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ನಾಣಯ್ಯ ಮಾತನಾಡಿ ಬಸವೇಶ್ವರರು ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಬಸವೇಶ್ವರರ ಆದರ್ಶ, ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ವಂತಾಗಬೇಕು. ಬಸವೇಶ್ವರರ ವಚನ ಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದರು.

ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ನಿರ್ದೇಶಕಿ ಶಾಲಿನಿ, ಎಚ್.ಜೆ. ಕುಮಾರ್, ಕಿಶೋರ್ ರೈ, ಪ್ರಶಾಂತ್, ರಾಜು, ಮತ್ತಿತರರು ಪಾಲ್ಗೊಂಡಿದ್ದರು.