ಸೋಮವಾರಪೇಟೆ, ಏ. 30: ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದಂತೆ ಮುಂದು ವರೆದಿದ್ದು, ರಾತ್ರಿ ವೇಳೆ ಮರಳಿನ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಜಿಲ್ಲೆಯ ಮರಳನ್ನು ಹೊರ ಜಿಲ್ಲೆಗೆ ಸಾಗಿಸುವದು, ಹೊರ ಜಿಲ್ಲೆಯಿಂದ ಮರಳನ್ನು ಕೊಡಗಿಗೆ ತರುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ನಿನ್ನೆ ರಾತ್ರಿ ಬೆಟ್ಟದಳ್ಳಿಯಲ್ಲಿ ಗ್ರಾಮಸ್ಥರೇ ಅಕ್ರಮ ಮರಳು ಲಾರಿಯನ್ನು ತಡೆಹಿಡಿದಿದ್ದಾರೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಸಕಲೇಶಪುರ ಕಡೆಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ವಾಹನವನ್ನು ಬೆಟ್ಟದಳ್ಳಿಯಲ್ಲಿ ಸ್ಥಳೀಯರೇ ಹಿಡಿದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ವಾಹನ (ಕೆ.ಎ.12 ಬಿ. 2982) ವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಹಲವು ವಾಹನಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದು, ಹಲವಷ್ಟು ಬಾರಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದರೂ ಯಾವದೇ ಪ್ರಯೋಜನ ವಿಲ್ಲದಂತಾಗಿದೆ. ಅಕ್ರಮ ಮರಳು ದಂಧೆಕೋರರು ರಾತ್ರಿ ವೇಳೆ ರಾಜಾರೋಷವಾಗಿ ಮರಳನ್ನು ಸಾಗಿಸುತ್ತಿದ್ದಾರೆ. ಪೊಲೀಸರು ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ತಿರುಗದೇ ಇರುವದು ಅನುಮಾನ ಮೂಡಿಸುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು. ಬಡವರಿಗೆ ಮನೆಕಟ್ಟಲೂ ಸಹ ಮರಳು ದೊರಕದ ಸ್ಥಿತಿ ನಿರ್ಮಾಣವಾಗಿದ್ದರೆ, ಹೊರ ಜಿಲ್ಲೆಗಳಿಗೆ ಮಾತ್ರ ಅಕ್ರಮವಾಗಿ ಮರಳು ಸಾಗಾಟಗೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿನ್ನೆ ರಾತ್ರಿ ಗ್ರಾಮಸ್ಥರು ಹಿಡಿದ ವಾಹನಕ್ಕೆ ಸಂಬಂಧಿಸಿದಂತೆ ಉಚ್ಚಂಗಿಯ ನಿವಾಸಿ, ಶಿಕ್ಷಣ ಇಲಾಖೆಯಲ್ಲಿರುವ ಗಣೇಶ್ ಎಂಬವರು ಮೊಬೈಲ್ ಕರೆ ಮಾಡಿ ಸ್ಥಳೀಯರಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.