ಶ್ರೀಮಂಗಲ, ಜ. 24: ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವದರಿಂದ ಸಮಾಜದಲ್ಲಿ ಗೌರವ ಹಾಗೂ ಅನುಭವ ಸಂಪಾದಿಸಬಹುದೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ವೀರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಿಭಾಗದಿಂದ ಆಯೋಜಿಸಲಾಗಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು, ಕ್ಷಣಮಾತ್ರದಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವ ಯಾವದೇ ಚಟುವಟಿಕೆಯನ್ನು ತಿಳಿದುಕೊಳ್ಳುವ ಹಾಗೂ ತಿಳಿಸಿಕೊಡುವ ಶಕ್ತಿಯನ್ನು ಪಡೆದಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದೊಂದಿಗೆ ನಾಲ್ಕನೇ ಅಂಗವಾಗಿ ಮಾಧ್ಯಮ ರಂಗ ಕೆಲಸ ಮಾಡುತ್ತಿದೆ ಎಂದು ಗುರುತಿಸಿ ಕೊಂಡಿದ್ದರೂ, ಈ ಮೂರು ಅಂಗಗಳ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಅತ್ಯುನ್ನತ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದು, ಒಂದು ಹೆಜ್ಜೆ ಮೇಲೆ ನಿಂತಿದೆ. ಮುದ್ರಣ, ಶ್ರವ್ಯ ಹಾಗೂ ದೃಶ್ಯರೂಪದ ಎಲ್ಲಾ ಮಾಧ್ಯಮ ಕ್ಷೇತ್ರಗಳು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಲಕ್ಷಾಂತರ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದರು.

ಮಾಧ್ಯಮ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ಮಾತನಾಡಿ, ಮಾಧ್ಯಮ ಎಂಬದು ಈಗಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ವಿಷಯಗಳನ್ನು ತಿಳಿದುಕೊಳ್ಳುವ ಹಾಗೂ ಸಮಾಜವನ್ನು ಬದಲಾವಣೆಯತ್ತ ಕೊಂಡ್ಯೊಯ್ಯುವತ್ತ ಬಹಳ ದೊಡ್ಡ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಧ್ಯೇಯದಂತೆ ಗ್ರಾಮೀಣಾಭಿವೃದ್ಧಿ ಸಾಧಿಸಲು ಮಾಧ್ಯಮ ಕ್ಷೇತ್ರ ಕೂಡ ಅಪಾರ ಕೊಡುಗೆ ನೀಡುತ್ತಿದೆ. ಆದ್ದರಿಂದ ಎನ್.ಎಸ್.ಎಸ್. ವಿದ್ಯಾರ್ಥಿಗಳು ಅತ್ಯವಶ್ಯವಾಗಿ ಪತ್ರಿಕೋದ್ಯಮ ವಿಷಯವನ್ನು ಶೈಕ್ಷಣಿಕ ವಿಷಯವಾಗಿ ಆಯ್ದುಕೊಳ್ಳುವದು ಅವಶ್ಯವಿದೆ ಎಂದರು.

ಕಾವೇರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ದೇಚಮ್ಮ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ತಿಳಿಸಿದ ಮಾಧ್ಯಮ ಕ್ಷೇತ್ರದ ವಿಷಯಗಳನ್ನು ಚೆನ್ನಾಗಿ ಮನನ ಮಾಡಿಕೊಳ್ಳುವದರೊಂದಿಗೆ ತಮ್ಮ ಬದುಕಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬದುಕಲು ಪ್ರಯತ್ನಿಸಿ. ಅದಕ್ಕಾಗಿ ಪತ್ರಿಕೋದ್ಯಮ ವಿಷಯವನ್ನು ಪದವಿ ವಿದ್ಯಾಭ್ಯಾಸದ ಸಂದರ್ಭ ಆಯ್ಕೆ ಮಾಡಿಕೊಳ್ಳುವದು ಅವಶ್ಯವಿದೆ ಎಂದರು.